ಬಸ್ ನಿಲ್ದಾಣ, ಘಟಕ ನಿರ್ಮಾಣಕ್ಕೆ ₹ 2.62 ಕೋಟಿ

7
ಕಾಮಗಾರಿ ಗುಣಮಟ್ಟದ ಕಾಯ್ದುಕೊಳ್ಳಿ: ಶಾಸಕ ಸೂಚನೆ

ಬಸ್ ನಿಲ್ದಾಣ, ಘಟಕ ನಿರ್ಮಾಣಕ್ಕೆ ₹ 2.62 ಕೋಟಿ

Published:
Updated:
Deccan Herald

ಕೊಣನೂರು: ರಾಮನಾಥಪುರದಲ್ಲಿ ನೂತನ ಬಸ್ ನಿಲ್ದಾಣ ಮತ್ತು ಸಾರಿಗೆ ಬಸ್ ಘಟಕದ ನೂತನ ಕಟ್ಟಡ ನಿರ್ಮಾಣಕ್ಕೆ ₹ 2.62 ಕೋಟಿ ಮಂಜೂರಾಗಿದ್ದು ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಎ.ಟಿ.ರಾಮಸ್ವಾಮಿ ಸೂಚಿಸಿದರು.

ಇಲ್ಲಿನ ಬಸ್‌ ಘಟಕಕ್ಕೆ ಭೇಟಿ ನೀಡಿ ಗುರುವಾರ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ನೂತನ ಬಸ್ ನಿಲ್ದಾಣ ಮತ್ತು ಘಟಕದ ಕಟ್ಟಡ ನಿರ್ಮಾಣವು ₹ 5 ಕೋಟಿ ವೆಚ್ಚದಾಗಿದ್ದು, ಈಗಾಗಲೇ ಅರ್ಧಕ್ಕಿಂತ ಹೆಚ್ಚು ಹಣ ಮಂಜೂರಾಗಿದ್ದು, ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಸಾರಿಗೆ ಬಸ್ ನಿಲ್ದಾಣ ಹಾಸನ- ಮೈಸೂರು, ಹಾಸನ- ಮಡಿಕೇರಿ, ಮಂಗಳೂರು ಮತ್ತು ಹಾಸನ-ಪಿರಿಯಾಪಟ್ಟಣ ಸೇರುವ ಮುಖ್ಯಸ್ಥಳದಲ್ಲಿದೆ. ಇಲ್ಲಿಂದ ಮಡಿಕೇರಿ, ಹಾಸನ, ಮೈಸೂರು, ಬೆಂಗಳೂರು ಮತ್ತು ಪಿರಿಯಾಪಟ್ಟಣ ಮಾರ್ಗ ಕೇರಳಕ್ಕೆ ಹೋಗುವ ಹತ್ತಾರು ಬಸ್‌ಗಳು ಪ್ರತಿನಿತ್ಯ ನಿಲ್ದಾಣದಲ್ಲಿ ಬಂದು ನಿಲ್ಲುತ್ತಿದ್ದು ಚಿಕ್ಕದಾಗಿರುವ ನಿಲ್ದಾಣದಿಂದಾಗಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಸುಸಜ್ಜಿತವಾದ ಬಸ್ ನಿಲ್ದಾಣವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಸೌಲಭ್ಯಗಳಿಗೆ ₹ 1 ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ನೀರು ಚರಂಡಿ ಮೂಲಕ ಕಾವೇರಿ ನದಿಗೆ ಸೇರುತ್ತಿರುವುದನ್ನು ತಪ್ಪಿಸಲು ಸಾರಿಗೆ ಸಂಸ್ಥೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ. ಶೌಚಾಲಯದ ಇಂಗುಗುಂಡಿಗೆ ಏರ್‌ಸಿಂಕ್ ಅಳವಡಿಸಲು ಕ್ರಮ ಕೈಗೊಂಡರೆ ಶೌಚಾಲಯದ ನೀರು ನದಿ ಸೇರುವುದನ್ನು ತಪ್ಪಿಸಬಹುದಾಗಿದೆ ಎಂದರು.

ಅರಕಲಗೂಡು ಪಟ್ಟಣದ ಅನಕೃ ವೃತ್ತದ ಸರ್ಕಲ್‌ನಲ್ಲಿರುವ ಹಳೆ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ತಂಗುದಾಣ, ವಾಣಿಜ್ಯ ಮಳಿಗೆಗಳು, ಶೌಚಾಲಯಗಳ ನಿರ್ಮಾಣಕ್ಕೆ ₹ 1.3 ಕೋಟಿ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.

ಸಾರಿಗೆ ಸಂಸ್ಥೆಯ ಮುಖ್ಯ ಎಂಜಿನಿಯರ್ ಎಸ್. ಜಗದೀಶ್ಚಂದ್ರ, ಕಾರ್ಯ ನಿರ್ವಾಹಕ ಎಂಜಿನಿಯರ್ ಪಿ.ಇ.ಪಾಲನೇತ್ರನಾಯಕ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಜಿ.ಕೃಷ್ಣಪ್ಪ, ಸಾರಿಗೆ ಘಟಕದ ವ್ಯವಸ್ಥಾಪಕ ದೇವರಾಜೇಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !