ಸಕಲೇಶಪುರ: ಮಲೆನಾಡಿನ ತಾಲ್ಲೂಕಿ ನಲ್ಲಿ ಪ್ರಸಕ್ತ ಮುಂಗಾರಿನಿಂದ ಹಿಂಗಾರಿನವರೆಗೂ ಪ್ರತಿ ತಿಂಗಳು ವಾಡಿಕೆಗಿಂತ ಕಡಿಮೆ ಮಳೆಯ ಪರಿಣಾಮ ಭತ್ತ ಹಾಗೂ ಇನ್ನಿತರ ಬೆಳೆಗಳಿಗೆ ಭಾರೀ ಹಾನಿ ಉಂಟಾಗಿದ್ದು, ರೈತರು ನಷ್ಟಕ್ಕೆ ಒಳಗಾಗಿದ್ದಾರೆ.
ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ಜಿಲ್ಲೆಯ ಜೀವನದಿ ಹೇಮಾವತಿ ಕನಿಷ್ಠ ಮೂರು ಬಾರಿಯಾದರೂ ಮೈ
ದುಂಬಿ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದ ಮೆಟ್ಟಿಲುಗಳನ್ನು ಮುಚ್ಚಿ ಗರ್ಭಗುಡಿವರೆಗೂ ಉಕ್ಕಿ ಹರಿಯುತ್ತಿದ್ದಳು.
ಹವಾಮಾನ ವೈಪರೀತ್ಯದ ಪರಿ ಣಾಮ ಈ ವರ್ಷ ಹೇಮಾವತಿ ನದಿಯ ನೀರು ದೇವಸ್ಥಾನದ ಎರ
ಡನೇ ಮೆಟ್ಟಿಲಿನವರೆಗೂ ಬಂದಿಲ್ಲ. ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಗಿಂತ ಶೇ 40 ಮಳೆಯ ಕೊರತೆ ಉಂಟಾಗಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಉತ್ತಮ ಮಳೆಯಾದರೂ, ಭತ್ತದ ಸಸಿ ಮಡಿ, ನಾಟಿ ಸಂದರ್ಭದಲ್ಲಿ ಶೇ 60 ಮಳೆ ಕೊರತೆಯಿಂದಾಗಿ ಭತ್ತದ ಬೆಳೆ ನಷ್ಟಕ್ಕೆ ಒಳಗಾಗಿದೆ.
ತಾಲ್ಲೂಕಿನಲ್ಲಿ ವಾಡಿಕೆಯಂತೆ ಮೇ ಮೊದಲ ವಾರದೊಳಗೆ ಭತ್ತದ ಸಸಿ ಮಡಿ ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಆದರೆ ಈ ವರ್ಷ ಜೂನ್ ಕೊನೆಯ ವಾರದವರೆಗೂ ವಾಡಿಕೆಗಿಂತ ಶೇ 70 ರಷ್ಟು ಮಳೆಯ ಕೊರತೆ ಉಂಟಾಗಿದ್ದರಿಂದ ಭತ್ತದ ಸಸಿ ಮಡಿ ಸುಮಾರು ಒಂದೂವರೆ ತಿಂಗಳು ತಡವಾಯಿತು. ನಂತರ ನಾಟಿ ಮಾಡುವುದಕ್ಕೂ ಮಳೆಯ ಕೊರತೆ ಉಂಟಾಯಿತು. ಇದರಿಂದ ಜೂನ್ ತಿಂಗಳಲ್ಲಿ ಮಾಡಬೇಕಾದ ನಾಟಿ, ಆಗಸ್ಟ್ ತಿಂಗಳಲ್ಲಿ ಮಾಡಬೇಕಾಯಿತು.
ಸಹಜವಾಗಿ ಮಲೆನಾಡಿನಲ್ಲಿ ಮೇ ಮೊದಲ ವಾರ ಮಳೆ ಶುರುವಾದರೆ, ಅಕ್ಟೋಬರ್‌ವರೆಗೂ ಸುರಿಯುತ್ತಲೇ ಇರುತ್ತಿತ್ತು. ವರ್ಷದ ಆರು ತಿಂಗಳು ನಿರಂತರ ಮಳೆಯಾಗಿ ಹಳ್ಳ, ಕೊಳ್ಳ, ಝರಿ ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಅಂತಹ ದೃಶ್ಯಗಳು ಕಾಣುತ್ತಿಲ್ಲ.
ತಾಲ್ಲೂಕಿನಲ್ಲಿ 7,900 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ 2023ನೇ ಸಾಲಿನಲ್ಲಿ 6,450 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ. ಶೇ 19 ರಷ್ಟು ಕಡಿಮೆ ಅಗಿದೆ. 2022ರಲ್ಲಿ 7,221 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.
ಕಾರ್ಮಿಕ ಕೊರತೆ, ಕಾಡಾನೆ, ಕಾಡುಕೋಣ ಹಾಗೂ ಇನ್ನಿತರ ವನ್ಯಜೀವಿಗಳ ನಿರಂತರ ದಾಳಿಯಿಂದ ಹೆತ್ತೂರು, ಕಸಬಾ, ಯಸಳೂರು, ಹಾನುಬಾಳು ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರು ಭತ್ತ ಬೆಳೆಯುವುದನ್ನೇ ಬಿಟ್ಟು ಅಂಗಡಿಯಿಂದ ಅಕ್ಕಿ ಖರೀದಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
‘ಮಳೆಯ ಕೊರತೆ, ತಡವಾಗಿ ನಾಟಿ ಮಾಡಿದ್ದು, ಮೋಡ, ಬಿಟ್ಟು ಬಿಟ್ಟು ಮಳೆ ಮತ್ತು ಬಿಸಿಲಿನ ಪರಿಣಾಮ ಬಹುತೇಕ ಭತ್ತದ ಬೆಳೆಗೆ ಬೆಂಕಿರೋಗ ಹರಡಿತ್ತು. ಟ್ರೈಕೋಜೋಲ್ ಸಿಂಪಡಣೆ ಮಾಡಿರುವ ಬೆಳೆಗಳಲ್ಲಿ ಚೇತರಿಕೆ ಕಂಡುಬಂದರೂ, ಇಳುವರಿ ಕುಂಠಿತವಾಗುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಹಂತ ಹಂತವಾಗಿ ರೈತರಿಗೆ ಬೆಂಕಿ ರೋಗ ತಡೆಯಲು ನಮ್ಮ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಕೆಲವು ಗದ್ದೆ ಬೈಲುಗಳಲ್ಲಿ ಕೆಲ ತಳಿಯ ಭತ್ತದ ಪೈರು ಹಾಲುಗಟ್ಟುತ್ತಿದೆ. ಅಂತಹ ಬೆಳೆಗೆ ಯಾವುದೇ ಗೊಬ್ಬರ ಅಗತ್ಯವಿಲ್ಲ. ತೆನೆ ಬರದೆ ಇರುವ ಬೆಳೆಗೆ ರೈತರು ಪೋಟ್ಯಾಷ್ ನೀಡುವುದು ಅಗತ್ಯ ಎನ್ನುತ್ತಾರೆ’ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆಲುವರಂಗಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.