ಹೆತ್ತೂರು: ಹೋಬಳಿ ಕುಮ್ಮತ್ತಹಳ್ಳಿ, ಅತ್ತಿಹಳ್ಳಿ, ಹಳ್ಳಿಯೂರು, ಬಾಚ್ಚಿಹಳ್ಳಿ ಸೇರಿ ಹಲವೆಡೆ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಭಾನುವಾರ ರಾತ್ರಿ ಕುಮತ್ತಹಳ್ಳಿ ಗ್ರಾಮದ ದೊಡ್ಡಪ್ಪಗೌಡ ಅವರ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗಿದೆ. ಗ್ರಾಮದಲ್ಲಿ ಪರಿಶೀಲಿಸಿದಾಗ ಚಿರತೆ ಹೆಜ್ಜೆಯ ಗುರುತುಗಳು ಕಂಡು ಬಂದಿವೆ. ಅತ್ತಿಹಳ್ಳಿ, ಹಳ್ಳಿಯೂರು, ಬಾಚ್ಚಿಹಳ್ಳಿ ಗ್ರಾಮದಲ್ಲಿ ಮಂಗಳವಾರ, ಬುಧವಾರ ಚಿರತೆ ಹೆಚ್ಚೆ ಕಾಣಿಸಿಕೊಂಡಿದ್ದು, ಮಲೆನಾಡು ಜನರನ್ನು ಮತ್ತಷ್ಟು ನಿದೆಗೆಡಿಸಿದೆ. ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಭಾಗದ ರೈತರು ತಮ್ಮ ಜಮೀನಿಗೆ ಹೋಗಲು ಭಯಪಡುವಂತಾಗಿದೆ. ಈಗಾಗಲೇ ಕಾಡಾನೆ ಮತ್ತು ಮಾನವ ಸಂಘರ್ಷ, ಕಾಡೆಮ್ಮೆ ಉಪಟಳ ಹೆಚ್ಚಾಗಿದ್ದು, ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ಈ ನಡುವೆ ಚಿರತೆ ಪ್ರತ್ಯಕ್ಷವಾಗಿದ್ದು, ನಾಯಿ ಹೊತ್ತೊಯ್ದಿದೆ. ಹೆಜ್ಜೆಯ ಗುರುತುಗಳು ಅಲ್ಲಲ್ಲಿ ಕಂಡುಬಂದಿದ್ದು, ಹೋಬಳಿಯ ಜನರಲ್ಲಿ ಆತಂಕ ಮೂಡಿಸಿದೆ. ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ರೈತರು ಕೃಷಿ ಕೈಬಿಡಬೇಕಾಗುತ್ತದೆ ಎಂದು ಕುಮ್ಮತಳ್ಳಿ ದಶರಥ್ ತಿಳಿಸಿದ್ದಾರೆ.
ಮಲೆನಾಡು ಭಾಗದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಯೋಜನೆಗಳಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ರೈತರ ಬದುಕನ್ನು ಅಪಾಯಕ್ಕೆ ತಳ್ಳಿದ್ದು, ಕೂಡಲೆ ಅರಣ್ಯ ಇಲಾಖೆ ಚಿರತೆಯನ್ನು ಪತ್ತೆ ಮಾಡಿ ಸೆರೆ ಹಿಡಿಯಬೇಕು ಎಂದು ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಜಿ. ದೇವರಾಜ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.