ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ ಲೋಪರಹಿತವಾಗಿರಲಿ

ಮತದಾರರ ಪಟ್ಟಿ ವೀಕ್ಷಕ ನವೀನ್ ರಾಜ್ ಸಿಂಗ್ ನಿರ್ದೇಶನ
Last Updated 26 ನವೆಂಬರ್ 2020, 3:38 IST
ಅಕ್ಷರ ಗಾತ್ರ

ಹಾಸನ: ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗ ಲಿದ್ದು,ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪ ಇರದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕ ನವೀನ್ ರಾಜ್ ಸಿಂಗ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಮತದಾರರ ಪಟ್ಟಿಪರಿಷ್ಕರಣೆ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು, ‘ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಗಮನಹರಿಸಿ. ಮೃತಪಟ್ಟ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿ. ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು 18 ವರ್ಷ ತುಂಬಿದ ಎಲ್ಲಾ ಅರ್ಹರಿಗೂ ಅವಕಾಶಇದ್ದು, ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ’ ಎಂದು ಹೇಳಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವ ಬೂತ್‍ಗಳನ್ನು ಪತ್ತೆ ಮಾಡಿ, ಅಲ್ಲಿ ಕಡಿಮೆ ಮತದಾನಕ್ಕೆ ಕಾರಣವೇನು? ಎಂಬುದರ ಬಗ್ಗೆ ಅಧ್ಯಯನಾತ್ಮಕವಾಗಿ ಪರಿಶೀಲಿಸಿ. ಮತದಾರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಿ’ ಎಂದರು.

‘ಮತದಾರರ ಪಟ್ಟಿಯಲ್ಲಿರುವ ಮತದಾರರಿಗೂ ಹಾಗೂ ಜನಸಂಖ್ಯೆಗೂ ನಡುವೆ ಇರುವ ಅನುಪಾತದ ಕುರಿತಂತೆ ಜಿಲ್ಲೆಯ ಅನುಪಾತವು 79:76 ಇರುತ್ತದೆ. ಪ್ರಸ್ತುತ ಸಾಲಿನ ಪರಿಷ್ಕರಣೆಯಲ್ಲಿ ಜಿಲ್ಲೆಯ ಅನುಪಾತಕ್ಕಿಂತ ಹೆಚ್ಚಿರುವ 193- ಶ್ರವಣಬೆಳಗೊಳ, 196- ಹಾಸನ ಮತ್ತು 197- ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಸೇರ್ಪಡೆಯ ಪ್ರಮಾಣವು ಹೆಚ್ಚಾಗಿದ್ದು, ಮತದಾರರ ಪಟ್ಟಿಯಿಂದ ಅನರ್ಹ ಮತದಾರರನ್ನು (ವಲಸೆ, ಮರಣ, ಪುನರಾವರ್ತನೆ) ಕೈಬಿಡಲು ಬಗ್ಗೆ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಬಗ್ಗೆ ಕಾರ್ಯಕ್ರಮದ ಯೋಜನೆ ಮತ್ತು ಇದರ ರೂಪುರೇಷೆಗಳ ಕುರಿತು ಜಿಲ್ಲಾಧಿಕಾರಿ ಆರ್‌. ಗಿರೀಶ್ ತಿಳಿಸಿದರು.

‘ಅರ್ಹತಾ ದಿನಾಂಕ 2021ರ ಜ.1ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವಿಶೇಷ ನೋಂದಣಿ ಕಾರ್ಯವನ್ನು ಆಯೋಗವು ನಿಗದಿಪಡಿಸಿರುವ ದಿನಾಂಕಗಳಂದು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಆಯಾ ಮತಗಟ್ಟೆ ಹಂತದ ಅಧಿಕಾರಿಗಳು ನ. 29, ಡಿ. 6 ಮತ್ತು 13ರ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಿಗದಿಪಡಿಸಿದ ಮತಗಟ್ಟೆಗಳಲ್ಲಿ ಹಾಜರಿದ್ದು, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಬೇಕು’ ಎಂದು ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ವೀಕ್ಷಕರ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿಗಳಾದ ಬಿ.ಎ. ಜಗದೀಶ್ ಹಾಗೂ ಗಿರೀಶ್ ನಂದನ್, ತಹಶೀಲ್ದಾರ್‌ ಶಿವಶಂಕರಪ್ಪ, ಚುನಾವಣಾ ತಹಶೀಲ್ದಾರ್‌ ಪದ್ಮನಾಭಶಾಸ್ತ್ರಿ, ಚುನಾವಣಾ ಶಿರಸ್ತೆದಾರ ಸಿದ್ದರಾಜು ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT