ಭಾನುವಾರ, ಆಗಸ್ಟ್ 1, 2021
23 °C
ಜಿಲ್ಲಾಧಿಕಾರಿಯಿಂದ ಆದೇಶ

ಜುಲೈ 5 ರವರೆಗೆ ಭಾಗಶಃ ಲಾಕ್‌ಡೌನ್: ಮೂರು ದಿನ ಖರೀದಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ 7.54 ರಷ್ಟಿದ್ದು, ಕೋವಿಡ್‌ ನಿಯಂತ್ರಣ ಉದ್ದೇಶದಿಂದ ಜುಲೈ 5ರ ಬೆಳಿಗ್ಗೆ 5 ಗಂಟೆವರೆಗೆ ಭಾಗಶಃ ಲಾಕ್‌ಡೌನ್‌ ಇರಲಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀ‌ಶ್‌ ಅವರು ಆದೇಶಿಸಿದ್ದಾರೆ.

ವಾರದಲ್ಲಿ ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಈ ಹಿಂದೆ ಬೆಳಿಗ್ಗೆ 6 ಗಂಟೆಯಿಂದ 10ರ ವರೆಗೆ ಮಾತ್ರ ಅವಕಾಶ ಇತ್ತು. ಅದನ್ನು ಸಡಿಲಿಕೆ ಮಾಡಿ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಲಾಗಿದೆ.

ಸೋಮವಾರ, ಬುಧವಾರ ಹಾಗೂ ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದೆ. ಮಂಗಳವಾರ, ಗುರುವಾರ, ಶನಿವಾರ, ಭಾನುವಾರ ಭಾಗಶಃ ಲಾಕ್‌ಡೌನ್‌ ಮುಂದು ವರೆಯಲಿದೆ ಎಂದು ತಿಳಿಸಿದ್ದಾರೆ.

ಪ್ರತಿ ದಿನ ದಿನಸಿ, ಹಣ್ಣು, ತರಕಾರಿ ಹಾಗೂ ಎಲ್ಲಾ ಅಗತ್ಯ ವಸ್ತುಗಳ ಹೋಂ ಡಿಲಿವರಿ ವ್ಯವಸ್ಥೆಗೆ ಅವಕಾಶವಿದೆ. ಉದ್ಯಾನಗಳಲ್ಲಿ ವಾಯು ವಿಹಾರಕ್ಕೆ ತೆರಳಲು ಬೆಳಿಗ್ಗೆ 5 ರಿಂದ 10 ಗಂಟೆ ವರೆಗೆ ಅವಕಾಶವಿದೆ. ಟ್ಯಾಕ್ಸಿ, ಆಟೋಗಳಿಗೆ ಗರಿಷ್ಟ ಇಬ್ಬರು ಪ್ರಯಾಣಿಸಲು ಅವಕಾಶವಿದೆ. ತಳ್ಳುವ ಗಾಡಿಗಳಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಲು ಪ್ರತಿ ದಿನ ಬೆಳಿಗ್ಗೆ 6 ರಿಂದ 2 ರವರೆಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಬಸ್‌ ಸಂಚಾರ ಆರಂಭ: ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ತಗ್ಗಿದ್ದರಿಂದ ಶೇ 50 ರಷ್ಟು ಪ್ರಯಾಣಿಕರಿಗೆ ಮಿತಿಗೊಳಿಸಿ ಬಸ್‌ ಸಂಚಾರ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.

‘ಜೂ. 21 ರಿಂದ ಪ್ರಯಾಣಿಕರಿಗೆ ಅನುಗುಣವಾಗಿ ಬಸ್‌ ಸಂಚಾರ ಆರಂಭಿಸಲು ನಿರ್ದೇಶನ ಬಂದಿದೆ. ಆದರೆ ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಲು ಅನುಮತಿ ಇಲ್ಲ. ಹಾಸನ ಘಟಕದಿಂದ ಅಂದಾಜು 250 ಬಸ್‌ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ’ ಎಂದು ಹಾಸನ ಬಸ್ ನಿಲ್ದಾಣದ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು