ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ 28 ಸ್ಥಾನಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಗೆಲುವು: ಅಗರವಾಲ್‌

ಪ್ರೀತಂಗೌಡ ಮೈಸೂರು ಕ್ಷೇತ್ರದ ಉಸ್ತುವಾರಿ, ಅಲ್ಲಿ ಕೆಲಸ ಮಾಡುತ್ತಾರೆ: ಅಗರವಾಲ್‌
Published 6 ಏಪ್ರಿಲ್ 2024, 13:00 IST
Last Updated 6 ಏಪ್ರಿಲ್ 2024, 13:00 IST
ಅಕ್ಷರ ಗಾತ್ರ

ಹಾಸನ: ನಾವು ಒಂದು ಸಂಘಟನೆ. ನಮಗೆ ಎಲ್ಲಿ ಕೆಲಸ ನೀಡಲಾಗುತ್ತದೆಯೋ ಅಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಕೆಲಸದ ಮೇಲೆ ಮೌಲ್ಯಮಾಪನ ನಡೆಯುತ್ತದೆ. ಪ್ರೀತಂ ಗೌಡರು ಮೈಸೂರು ಬಿಟ್ಟು ಬಂದರೆ, ನಾನು ಅವರ ಮೇಲೆ ವಿಚಾರಣೆ ನಡೆಸುತ್ತೇನೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್‌ ಅಗರವಾಲ್‌ ಹೇಳಿದರು.

ಬಿಜೆಪಿ–ಜೆಡಿಎಸ್‌ ನಾಯಕರ ಜೊತೆಗಿನ ಸಮನ್ವಯ ಸಮಿತಿ ಸಭೆಯ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ– ಜೆಡಿಎಸ್ ಮೈತ್ರಿಕೂಟ ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತದೆ ಎಂದು ಗ್ಯಾರಂಟಿ ಕೊಡುತ್ತೇವೆ. ಪ್ರೀತಂ ಗೌಡರಿಗೆ ಹಾಸನದಲ್ಲಿ ಇರಬೇಡ ಎಂದು ನಾನೇ ಹೇಳಿದ್ದೇನೆ ಎಂದರು.

ನಮಗೆ ಹಾಸನ ಎಷ್ಟು ಮುಖ್ಯವೋ, ಮೈಸೂರು ಅಷ್ಟೇ ಮುಖ್ಯ. ಅಲ್ಲಿ ಯದುವೀರ್ ಅವರನ್ನು ನಿಲ್ಲಿಸಿದ್ದೇವೆ. ನಮ್ಮ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರತಿದಿನ ಹಾಸನದಲ್ಲಿ ಇರಬೇಕು ಎಂದು ನಿರೀಕ್ಷಿಸುವುದಿಲ್ಲ. ಅವರು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಏಪ್ರಿಲ್ 1 ರಂದು ಹಾಸನದ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದೇವೆ. ಅದರಲ್ಲಿ ಪ್ರೀತಂಗೌಡ ಅವರು ಭಾಗವಹಿಸಿದ್ದರು. ಅಲ್ಲಿ ಚರ್ಚಿಸಿ, ಅಗತ್ಯವಿರುವ ತಯಾರಿ ಮಾಡಿದ್ದೇವೆ. ನೀವು ಪದೇ ಪದೇ ಏಕೆ ಈ ವಿಷಯ ಪ್ರಸ್ತಾಪ ಮಾಡುತ್ತೀರಿ ಎಂದು ತಿಳಿಯುತ್ತಿಲ್ಲ ಎಂದು ಮಾಧ್ಯಮದವರನ್ನು ಮರು ಪ್ರಶ್ನಿಸಿದರು.

ನಾನು ಉತ್ತರ ಪ್ರದೇಶವನ್ನು 20 ವರ್ಷಗಳಿಂದ ಪ್ರತಿನಿಧಿಸುತ್ತಿದ್ದೇನೆ. ಈಗ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಎಲ್ಲಿ ನಿಯೋಜಿಸಿದ್ದಾರೋ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಕರ್ನಾಟಕದ ಒಬ್ಬ ಪ್ರಭಾರಿ ದಿನವೂ ಉತ್ತರ ಪ್ರದೇಶಕ್ಕೆ ಹೋಗಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಫೆ. 15ರಿಂದ ನಾನು ಇಲ್ಲಿಯೇ ಇದ್ದೇನೆ. ಅದೇ ರೀತಿ ಪ್ರೀತಂಗೌಡರು ಮೈಸೂರಿನ ಉಸ್ತುವಾರಿ ಆಗಿ ಅಲ್ಲಿಗೆ ಹೋಗಿದ್ದಾರೆ. ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ಜಾಗದಲ್ಲಿ ಇರಲು ಹೇಗೆ ಸಾಧ್ಯ? ಹಾಗಾಗಿ ಅವರು ಇಲ್ಲಿ ಇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ಗೆ ಮತ ಹಾಕುವಂತೆ ಪ್ರೀತಂ ಗೌಡ ಬೆಂಬಲಿಗರು ಹೇಳಿಕೆ ನೀಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ನಾವು ಹಾಸನದಲ್ಲಿ ಸಮೀಕ್ಷೆ ನಡೆಸಿದ್ದೇವೆ. ಆ ರೀತಿ ಯಾವುದೂ ಕಂಡುಬಂದಿಲ್ಲ ಎಂದರು.

ನಮ್ಮ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು ವಿಶ್ವಾಸದಲ್ಲಿದ್ದಾರೆ. ಈ ಬಾರಿ ಮೋದಿ ಸರ್ಕಾರ ತರಬೇಕು ಎಂದು ಅವರು ಕೆಲಸ ಮಾಡುತ್ತಿದ್ದು, ನನ್ನಷ್ಟೇ ಉತ್ಸಾಹದಲ್ಲಿ ಅವರು ಕಾರ್ಯನಿರತರಾಗಿದ್ದಾರೆ ಎಂದು ತಿಳಿಸಿದರು.

ಎಲ್ಲ ಸಮಸ್ಯೆ ಪರಿಹಾರ: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮಣ್ಣ ಪರ ಮಾಧುಸ್ವಾಮಿ ಪ್ರಚಾರ ಮಾಡುತ್ತಿದ್ದಾರೆ. ಈಶ್ವರಪ್ಪ ವಿಚಾರದಲ್ಲಿ ಸಣ್ಣ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದೇನೆ. ಅವರು ಕೂಡ ನರೇಂದ್ರ ಮೋದಿ ಪರ ಪ್ರಚಾರ ನಡೆಸುತ್ತಿದ್ದಾರೆ. ಅವರು ನಾಮಪತ್ರ ವಾಪಸ್ ಪಡೆಯದಿದ್ದರೆ ಆಗ ಈ ಬಗ್ಗೆ ಪ್ರಶ್ನಿಸಿ ಎಂದು ರಾಧಾಮೋಹನ್‌ದಾಸ್ ಅಗರವಾಲ್‌ ಹೇಳಿದರು.

ಈಶ್ವರಪ್ಪ ಅವರು ಗೆದ್ದ ನಂತರ ಬಿಜೆಪಿ ಜೊತೆ ವಿಲೀನ ಆಗುವುದಾಗಿ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣೆ ಐತಿಹಾಸಿಕವಾಗಲಿದೆ. ನಮ್ಮ ಎದುರಾಳಿ ಬಳಿ ಅಪಾರ ಸಂಪತ್ತಿದ್ದು, ₹ 500 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವವರು, ಯಾವ ವ್ಯಾಪಾರ ಮಾಡುತ್ತಿದ್ದಾರೆ ಎಂಬುದು ತಿಳಿಯದು ಎಂದು ಟೀಕಿಸಿದರು.

ಅಂತಹ ವ್ಯಕ್ತಿಯ ಎದುರಿಗೆ ಸ್ಪರ್ಧಿಸಿರುವ ಡಾ.ಸಿ.ಎನ್‌. ಮಂಜುನಾಥ, ಜೀವನ ಪೂರ್ತಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಅವರ ಬಳಿ ಚುನಾವಣೆ ನಡೆಸಲು ಹಣವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಹೀನಾಯವಾಗಿ ಸೋಲಲಿದ್ದಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ

ದೇವೇಗೌಡರು ಮುತ್ಸದ್ದಿ ರಾಜಕಾರಣಿ. ಕರ್ನಾಟಕದ ಆಸ್ತಿ. ಉಸ್ತುವಾರಿ ಸಚಿವರು ದೇವೇಗೌಡರ ಬಗ್ಗೆ ಪದೇ ಪದೇ ಮಾತನಾಡಿದ್ದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಜೂನ್ 4ರಂದು ತಕ್ಕ ಉತ್ತರ ಕೊಡುತ್ತಾರೆ.

-ಪ್ರಜ್ವಲ್‌ ರೇವಣ್ಣ ಎನ್‌ಡಿಎ ಅಭ್ಯರ್ಥಿ

ಲೋಕಸಭೆ ಚುನಾವಣೆಯ ನಂತರ ಕರ್ನಾಟಕ ಕಾಂಗ್ರೆಸ್‌ನ 5 ಗ್ಯಾರಂಟಿಗಳು ಸ್ಥಗಿತಗೊಳ್ಳಲಿವೆ ಎಂದು ನಾನು ನಿಮಗೆ ಗ್ಯಾರಂಟಿ ಕೊಡುತ್ತೇನೆ. ಅವರ ಸರ್ಕಾರವೇ ಗ್ಯಾರಂಟಿಗಳನ್ನು ಬಂದ್ ಮಾಡಲಿದೆ.

-ರಾಧಾಮೋಹನ್‌ದಾಸ್‌ ಅಗರವಾಲ್‌ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ

ಒಟ್ಟಾಗಿ ಕೆಲಸ ಮಾಡುತ್ತೇವೆ: ಪ್ರಜ್ವಲ್‌

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮುಂದಿನ ದಿನಗಳಲ್ಲಿ ನಮ್ಮ ಜೊತೆ ಪ್ರಚಾರದಲ್ಲಿ ಒಗ್ಗಟ್ಟಾಗಿ ಹೋಗುವ ಕೆಲಸ ಮಾಡುತ್ತೇವೆ ಎಂದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು. ತುರ್ತು ಸಮನ್ವಯ ಸಮಿತಿ ಸಭೆಗೆ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾಮೋಹಸ್‌ದಾಸ್ ಅವರು ಹಾಸನಕ್ಕೆ ಬಂದಿದ್ದಾರೆ. ಬಿಜೆಪಿ ಮುಖಂಡರು ಶಾಸಕರನ್ನು ಕರೆದು ಸಭೆ ಮಾಡಿದ್ದು ಒಂದೊಂದೇ ತಾಲ್ಲೂಕಿನ ಬಗ್ಗೆ ಮಾಹಿತಿ ಕಲೆಹಾಕಿ ಎಲ್ಲ ಮುಖಂಡರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟನ್ನು ಮೂಡಿಸಿದ್ದಾರೆ ಎಂದರು. ನಮ್ಮ ಮುಖ್ಯವಾದ ಗುರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಬೇಕು. 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಅದರಲ್ಲೂ ಹಾಸನದ ಎನ್‌ಡಿಎ ಅಭ್ಯರ್ಥಿಯನ್ನು ದೆಹಲಿಗೆ ತೆಗೆದುಕೊಂಡು ಹೋಗಬೇಕು ಎಂದು ಸಭೆ ಮಾಡಿದ್ದಾರೆ. ಇದರಿಂದ ಬಹಳ ಸಂತೋಷವಾಗಿದೆ. ಎಲ್ಲ ಒಗ್ಗಟ್ಟಾಗಿ ಹೋಗುವ ನಿರ್ಧಾರ ಮಾಡಿದ್ದೇವೆ ಎಂದು ಪ್ರಜ್ವಲ್ ತಿಳಿಸಿದರು . ಪ್ರೀತಂಗೌಡರಿಗೆ ಮೈಸೂರು ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದಾರೆ. ಅಲ್ಲಿಯೂ ಸ್ವಲ್ಪ ತಾಂತ್ರಿಕ ಸಮಸ್ಯೆ ಇದೆ. ಅದಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ನಮ್ಮ ಜೊತೆ ಇದ್ದು ಒಗ್ಗಟ್ಟಾಗಿ ಹೋಗುವ ಕೆಲಸ ಮಾಡುತ್ತೇವೆ. ಅದನ್ನು ಅಗರವಾಲ್‌ ಅವರು ಮಾತನಾಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT