ಸೋಮವಾರ, ಜುಲೈ 4, 2022
23 °C
ಖರೀದಿ ಕೇಂದ್ರ ತೆರೆಯಲು ಬೇಲೂರು ರೈತರ ಆಗ್ರಹ: ಕಡಿಮೆ ಬೆಲೆಗೆ ಖರೀದಿ– ಆರೋಪ

ಮೆಕ್ಕೆಜೋಳ ಬೆಲೆ ಕುಸಿತ: ರೈತ ಕಂಗಾಲು

ಮಲ್ಲೇಶ Updated:

ಅಕ್ಷರ ಗಾತ್ರ : | |

Prajavani

ಬೇಲೂರು: ಈ ಬಾರಿ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಸಿಗದೆ ತಾಲ್ಲೂಕಿನ ರೈತರು ಕಂಗಾಲಾಗಿದ್ದಾರೆ.

ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಾಕಷ್ಟು ಬೆಳೆನಷ್ಟ ಅನುಭವಿಸಿದ್ದ ರೈತರು, ಮೆಕ್ಕೆಜೋಳ ಬೆಳೆದಿದ್ದರು. ಉತ್ತಮವಾಗಿ ಬೆಳೆದ ಜೋಳ ತೆನೆ ಬರುವಷ್ಟರಲ್ಲಿ ಅತಿಯಾದ ಗಾಳಿಯಿಂದ ಶೇ 75 ರಷ್ಟು ಬೆಳೆ ಹಾನಿಯಾಯಿತು. ಆದರೂ ಬಂದ ಫಸಲಿಗೆ ಉತ್ತಮ ದರ ದೊರೆಯುವುದೆಂಬ ಆಶಾಭಾವ ಹೊಂದಿದ್ದ ರೈತರಿಗೆ ಇದೀಗ ಬೆಲೆ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲ್ಲೂಕಿನಲ್ಲಿ ಮುಂಗಾರಿನಲ್ಲಿ 16,716 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಆಗಸ್ಟ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ತೆನೆಯಲ್ಲೇ ಮೊಳಕೆ ಬಂದು ಬಹಳಷ್ಟು ನಷ್ಟವಾಯಿತು. ಸುಮಾರು 513 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಹಾನಿಗೊಳಗಾಯಿತು ಎಂಬುದಾಗಿ ಕೃಷಿ ಇಲಾಖೆ ವರದಿ ನೀಡಿದೆ.

ಬೆಳೆ ಹಾನಿಯಿಂದ ತೊಂದರೆಗೆ ಸಿಲುಕಿರುವ ರೈತರು ಸೂಕ್ತ ಪರಿಹಾರ ನೀಡುವಂತೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈವರಗೂ ಪರಿಹಾರ ಬಂದಿಲ್ಲ. ಜೊತೆಗೆ ಜೋಳಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ. ಕಳೆದ ವರ್ಷ ಒಂದು ಕ್ವಿಂಟಲ್ ₹1,800 ರಿಂದ ₹1,900 ವರೆಗೆ ಬೆಲೆ ಇತ್ತು. ಈ ವರ್ಷ ₹1,200 ರಿಂದ ₹1,350ಕ್ಕೆ ಇಳಿದಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆಯನ್ನೂ ನೀಡುತ್ತಿಲ್ಲ ಎಂಬುದು ರೈತರ ಅಳಲು.

ಬೆಲೆ ಹೆಚ್ಚಳದ ನಿರೀಕ್ಷೆಯಲ್ಲಿ ಬೆಳೆಗಾರರಿದ್ದು, ಶೇ 50ರಷ್ಟು ಜೋಳ ಮಾರಾಟ ಮಾಡದೆ ಇಟ್ಟುಕೊಂಡಿದ್ದಾರೆ.

‘ಕೇಂದ್ರ ಸರ್ಕಾರ 26 ಬೆಳೆಗಳಿಗೆ  ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಿ ಆದೇಶ ಹೊರಡಿಸಿದರೂ ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ. ಕ್ವಿಂಟಲ್ ಮೆಕ್ಕೆಜೋಳಕ್ಕೆ ₹1,850 ಎಂಎಸ್‌ಪಿ ನಿಗದಿಪಡಿಸಿದ್ದರೆ, ವ್ಯಾಪಾರಿಗಳು ರೈತರಿಂದ ₹1,200 ರಿಂದ ₹1,300ಕ್ಕೆ ಖರೀದಿಸುತ್ತಿದ್ದಾರೆ. ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೋಗ ಮಲ್ಲೇಶ್ ಆಗ್ರಹಿಸಿದರು.

‘ಅತಿವೃಷ್ಟಿ, ಕಾಡಾನೆಹಾವಳಿಯಿಂದ ಮೆಕ್ಕೆಜೋಳ ನಾಶವಾಗಿದೆ. ಉಳಿದ ಮೆಕ್ಕೆಜೋಳಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದು ಸನ್ಯಾಸಿಹಳ್ಳಿ ರೈತ ನರೇಂದ್ರ ಆಗ್ರಹಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು