ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯಲೋಪ: ಮಲ್ಲಿಪಟ್ಟಣ ಡಿಆರ್‌ಎಫ್‌ಒ ಅಮಾನತು

ಮರ ಕಡಿದ ಪ್ರಕರಣದಲ್ಲಿ ಶಾಮೀಲು: ಕರ್ತವ್ಯಲೋಪ
Published 2 ಮಾರ್ಚ್ 2024, 13:36 IST
Last Updated 2 ಮಾರ್ಚ್ 2024, 13:36 IST
ಅಕ್ಷರ ಗಾತ್ರ

ಹಾಸನ: ಅಕ್ರಮವಾಗಿ ಮರ ಕಡಿದ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣದ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಕೆ.ಎನ್. ರಘು ಅವರನ್ನು ಅಮಾನತು ಮಾಡಲಾಗಿದೆ.

ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣದ ಹೋಬಳಿಯ ಬೂದನೂರು ಗ್ರಾಮದ ಸರ್ವೆ ನಂಬರ್‌ 37 ರ ಉಮೇಶ್‌ ಎಂಬುವವರ ಜಮೀನಿನಲ್ಲಿ ಅಕ್ರಮವನ್ನು ಮರಗಳನ್ನು ಕಡಿಯಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಸಕಲಶಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಹೊನ್ನೆ, ನಂದಿ, ನೇರಳೆ, ಹಲಸು ಸೇರಿದಂತೆ ಸುಮಾರು 50–60 ಮರಗಳನ್ನು ಜೆಸಿಬಿಯಿಂದ ಕಡಿದಿರುವುದು ಕಂಡು ಬಂದಿದೆ.

ಉಪ ವಲಯ ಅರಣ್ಯಾಧಿಕಾರಿ ರಘು ಅವರನ್ನು ಸ್ಥಳಕ್ಕೆ ಕರೆಸಿ, ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಇದು ನನ್ನ ಗಮನಕ್ಕೆ ಬಂದಿಲ್ಲ. ವಾರದಿಂದ ಈ ಕಡೆ ಬಂದಿಲ್ಲ ಎಂದು ರಘು ಉತ್ತರಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ರಘು ಅವರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೇ, ಇಲಾಖೆ ಮೇಲಧಿಕಾರಿಗಳ ನಿರ್ದೇಶನಗಳನ್ನು ಪಾಲಿಸದೇ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ತಿಳಿಸಿದ್ದಾರೆ.

ರಘು ಅವರು ಮರಗಳ್ಳರೊಂದಿಗೆ ಶಾಮೀಲಾಗಿದ್ದು, ಮದ್ಯ ಸೇವನೆ ಮಾಡಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲೇ ಸಾರ್ವಜನಿಕರೊಂದಿಗೆ ಅತಿರೇಕದ ವರ್ತನೆ, ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಎಂಬ ಮೂರು ದೂರುಗಳು ದಾಖಲಾಗಿದ್ದವು. ಈ ಬಗ್ಗೆ ರಘು ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ, ನೋಟಿಸ್ ಹಾರಿಕೆ ಉತ್ತರ ನೀಡಿದ್ದಾರೆ ಎಂದು ರವಿಶಂಕರ್ ಆದೇಶದಲ್ಲಿ ತಿಳಿಸಿದ್ದಾರೆ.

ಈಚೆಗೆ ಬೇಲೂರಿನಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ, ವಲಯದ ಸಿಬ್ಬಂದಿಯನ್ನು ಬಂದೂಕಿನೊಂದಿಗೆ ಕರೆತರುವಂತೆ ಮೇಲಧಿಕಾರಿಗಳು ರಘು ಅವರಿಗೆ ಸೂಚನೆ ನೀಡಿದ್ದರು. ಆದರೆ, ರಘು ಕೇಂದ್ರ ಸ್ಥಾನದಲ್ಲಿ ಇರದೇ, ಹಾಸನ ತಾಲ್ಲೂಕಿನ ಕಟ್ಟಾಯ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳನ್ನು ಭೇಟಿ ಮಾಡಲು ಹೋಗಿರುವುದಾಗಿ ತಿಳಿಸಿದ್ದರು. ಜವಾಬ್ದಾರಿಯುತ ಉಪ ವಲಯ ಅರಣ್ಯಾಧಿಕಾರಿಯಾಗಿ ಕೇಂದ್ರ ಸ್ಥಾನ ಬಿಡುವ ಮೊದಲು ಮೇಲಧಿಕಾರಿಗಳ ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ.

ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ರಘು ಅವರನ್ನು ಅಮಾನತುಗೊಳಿಸಿ ಸಿಸಿಎಫ್‌ ರವಿಶಂಕರ್‌, ಫೆ.27 ರಂದು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT