ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಹಣದ ಹೊಳೆ: ಎಚ್‌.ಕೆ. ಕುಮಾರಸ್ವಾಮಿ ಆರೋಪ

Last Updated 17 ಏಪ್ರಿಲ್ 2022, 5:43 IST
ಅಕ್ಷರ ಗಾತ್ರ

ಸಕಲೇಶಪುರ: ‘ಎತ್ತಿನಹೊಳೆ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಈ ಯೋಜನೆ ಹೆಸರಿನಲ್ಲಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಹಣವನ್ನು ನೀರಿನಲ್ಲಿ ಹೋಮ ಮಾಡುತ್ತಿದೆ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದಲ್ಲಿ ಜೆಡಿಎಸ್‌ ಶನಿವಾರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘3 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ರಾಜ್ಯ ಸರ್ಕಾರ ನೀಡಿದ್ದ ಭರವಸೆ 8 ವರ್ಷ ಆದರೂ ಪೂರ್ಣಗೊಂಡಿಲ್ಲ. ₹12.5 ಸಾವಿರ ಕೋಟಿ ಯೋಜನಾ ವೆಚ್ಚದ ಈ ಕಾಮಗಾರಿ ವಿಳಂಬದಿಂದಾಗಿ ಈಗ ₹23 ಸಾವಿರ ಕೋಟಿ ತಲುಪಿದೆ. ಇನ್ನೂ ಶೇ 50ರಷ್ಟು ಕಾಮಗಾರಿ ಆಗಿಲ್ಲ. ಮುಂದೆ ₹33 ಸಾವಿರ ಕೋಟಿಯಾಗಬಹುದು. ಎತ್ತಿನಹೊಳೆ ಹೆಸರಲ್ಲಿ ಹಣದ ಹೊಳೆ ಹರಿಯು ತ್ತಿದೆಯೇ ಹೊರತು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರ ಬಾಯಾರಿಕೆ ಇಂಗುವುದಿಲ್ಲ’ ಎಂದರು.

‘ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳ ಸ್ಥಿತಿಯೂ ಇದೇ ರೀತಿಯಿದೆ. ಈ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಿ ರೈತರ ಭೂಮಿಗೆ ನೀರು ಹರಿಸುವ ಶಪಥ ಮಾಡುವ ಸಲುವಾಗಿ ಜೆಡಿಎಸ್‌ನಿಂದ ರಾಜ್ಯದಾದ್ಯಂತ 15 ತಂಡಗಳ ಮೂಲಕ ಜಲಧಾರೆ ಯಾತ್ರೆ ನಡೆಸಲಾಗುತ್ತಿದೆ’ ಎಂದರು.

ಹೇಮಾವತಿ ಹಾಗೂ ಎತ್ತಿನಹಳ್ಳದಿಂದ ಜಿ.ಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಮಹಿಳಾ ಘಟಕದ ಕಾರ್ಯಕರ್ತೆಯರು ಕಳಸದಲ್ಲಿ ನೀರು ಹೊತ್ತು ಪಟ್ಟಣದಲ್ಲಿ ಜನತಾ ಜಲಧಾರೆ ರಥದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಬೇಲೂರು ಶಾಸಕ ಕೆ.ಎಸ್‌.ಲಿಂಗೇಶ್‌, ಮಧುಗಿರಿ ಶಾಸಕ ವೀರಭದ್ರಯ್ಯ, ಮಾಜಿ ಶಾಸಕರಾದ ಸುರೇಶ್‌ಬಾಬು, ತಿಮ್ಮರಾಯಪ್ಪ, ಸುಧಾಕರ್‌ ಲಾಲ್‌, ಅಂಜನಪ್ಪ, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ದೊಡ್ಡದೀಣೆ ಸ್ವಾಮಿ, ಯುವ ಅಧ್ಯಕ್ಷ, ಉಜ್ಮಾ ರಿಜ್ವಿ, ಮುಖಂಡರಾದ ಬಿ.ಎ. ಜಗನ್ನಾಥ್, ಸಚಿನ್‌ ಪ್ರಸಾದ್‌, ಪುರಸಭಾ ಅಧ್ಯಕ್ಷ ಕಾಡಪ್ಪ, ಉಪಾಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್, ಹುರುಡಿ ವಿಕ್ರಂ, ಮಿಲಾಫ್‌ ಖಲೀಲ್‌, ಬೆಕ್ಕನಹಳ್ಳಿ ನಾಗರಾಜ್‌, ಅಣ್ಣೇಗೌಡ, ಎಸ್‌.ಎಂ. ಮಂಜುನಾಥ್, ಯಾಗ್ದಾರ್‌ ಇಬ್ರಾಹಿಂ ಇದ್ದರು.

‘₹1 ಸಾವಿರ ಕೋಟಿ ನೀಡಲಿ’

‘ಎತ್ತಿನಹೊಳೆ ಯೋಜನೆ ಮೂಲಕ ಬಯಲುಸೀಮೆ ಜನರಿಗೆ ಕುಡಿಯುವ ನೀರು ಪೂರೈಸಲು ಸಕಲೇಶಪುರ ತಾಲ್ಲೂಕಿನ ಜನರ ತ್ಯಾಗ ದೊಡ್ಡದು. ಇಲ್ಲಿನ ರೈತರು ಭೂಮಿ ಕಳೆದುಕೊಂಡಿದ್ದಾರೆ, ಪರಿಸರ ನಾಶವಾಗಿದೆ, ರಸ್ತೆಗಳು ಹಾಳಾಗಿವೆ. 5 ಚೆಕ್‌ಡ್ಯಾಂಗಳಿಂದಾಗಿ ವಾತಾವರಣದಲ್ಲಿ ಏರುಪೇರು ಉಂಟಾಗಿದೆ. ಆದರೆ, ಸರ್ಕಾರ ಮಾತ್ರ ತಾಲ್ಲೂಕಿನ ಮೂಲ ಸೌಲಭ್ಯಗಳಿಗೆ ವಿಶೇಷ ಅನುದಾನ ನೀಡದೆ ವಂಚಿಸುತ್ತಿದೆ’ ಎಂದು ಎಚ್‌.ಕೆ. ಕುಮಾರಸ್ವಾಮಿ ಆರೋಪಿಸಿದರು.

‘ಜಲವಿದ್ಯುತ್, ಎತ್ತಿನಹೊಳೆ, ಅನಿಲ ಪೈಪ್‌ಲೈನ್‌, ರೈಲ್ವೆ, ಹೈಟೆನ್ಷನ್‌ ವಿದ್ಯುತ್ ಮಾರ್ಗ ಹೀಗೆ.. ಹಲವು ಯೋಜನೆಗಳಿಗೆ ಪ್ರತಿಯಾಗಿ ಸರ್ಕಾರ ತಾಲ್ಲೂಕಿನ ಅಭಿವೃದ್ಧಿಗೆ ಬಜೆಟ್‌ನಲ್ಲಿ ಪ್ರತಿ ವರ್ಷ ಒಂದು ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT