ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಕಡಿದ ಪ್ರಕರಣ: ಸಂಸದ ಪ್ರತಾಪ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು

Published 31 ಡಿಸೆಂಬರ್ 2023, 13:03 IST
Last Updated 31 ಡಿಸೆಂಬರ್ 2023, 13:03 IST
ಅಕ್ಷರ ಗಾತ್ರ

ಹಾಸನ: ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿತರಾಗಿದ್ದ ವಿಕ್ರಂ ಸಿಂಹ ಅವರಿಗೆ ಬೇಲೂರಿನ ಹಿರಿಯ ಸಿವಿಲ್‌ ನ್ಯಾಯಾಲಯ ಭಾನುವಾರ ಜಾಮೀನು ಮಂಜೂರು ಮಾಡಿದೆ.

ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದ ವಿಕ್ರಂ ಸಿಂಹ ಅವರನ್ನು ಇಲ್ಲಿನ ಗೆಂಡೆಕಟ್ಟೆಯಲ್ಲಿರುವ ಅರಣ್ಯ ಇಲಾಖೆಯ ಅತಿಥಿಗೃಹಕ್ಕೆ ಕರೆತರಲಾಗಿತ್ತು. ರಾತ್ರಿಯಿಂದ ಅರಣ್ಯ ಅಧಿಕಾರಿಗಳು ವಿಚಾರಣೆ ನಡೆಸಿದರು. ಭಾನುವಾರ ಬೆಳಿಗ್ಗೆ ಇಲ್ಲಿನ ಹಿಮ್ಸ್‌ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಕ್ರಂ ಸಿಂಹ, ‘ತುಂಬಾ ವಿಷಯಗಳಿವೆ. ಕಾಲ ಬರಲಿ, ಎಲ್ಲವನ್ನೂ ಹೇಳುತ್ತೇನೆ. ಎಷ್ಟು ಪಿತೂರಿ ಮಾಡುತ್ತಿದ್ದಾರೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಯಾರ ಕೈವಾಡ ಇದೆ ಎನ್ನುವುದನ್ನೂ ತಿಳಿಸುತ್ತೇನೆ. ಯಾರನ್ನು ನೀವು ನಿಷ್ಠಾವಂತ ಅಧಿಕಾರಿ ಎನ್ನುತ್ತಿದ್ದೀರೋ ಅವರ ನಿಷ್ಠೆ ಯಾರಿಗೆ ಎನ್ನುವುದನ್ನೂ ಹೇಳುತ್ತೇನೆ’ ಎಂದು ಪರೋಕ್ಷವಾಗಿ ಬೇಲೂರು ತಹಶೀಲ್ದಾರ್ ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.

‘ನಮ್ಮನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ನಮ್ಮ ಅಣ್ಣನನ್ನು ಟಾರ್ಗೆಟ್ ಮಾಡಲಾಗಿದ್ದು, ಇದೆಲ್ಲ ವ್ಯವಸ್ಥಿತವಾಗಿ ನಡೆಯುತ್ತಿರುವ ಪಿತೂರಿ’ ಎಂದು ಹೇಳಿದರು.

ಕೂಡಲೇ ವಿಕ್ರಂ ಸಿಂಹ ಅವರನ್ನು ಘಟನಾ ಸ್ಥಳವಾದ ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿಗೆ ಕರೆದೊಯ್ಯಲಾಯಿತು. ಅಲ್ಲಿ ಸ್ಥಳ ಮಹಜರು ಮಾಡಿದ ಅರಣ್ಯಾಧಿಕಾರಿಗಳು, ಸಂಜೆಯ ವೇಳೆಗೆ ಬೇಲೂರಿನ ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಕಾಶ್‌ ನಾಯ್ಕ್‌ ಅವರ ನಿವಾಸದಲ್ಲಿ ವಿಕ್ರಂ ಸಿಂಹ ಅವರನ್ನು ಹಾಜರುಪಡಿಸಿದರು.

ಇದೇ ವೇಳೆ ವಿಕ್ರಂ ಸಿಂಹ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ‘ಪ್ರಕರಣವು ಜಾಮೀನಿಗೆ ಅರ್ಹವಾಗಿದ್ದು, ಯಾವುದೇ ಷರತ್ತಿಲ್ಲದೇ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ’ ಎಂದು ವಿಕ್ರಂ ಸಿಂಹ ಪರ ವಕೀಲ ಚಂದ್ರೇಗೌಡ ತಿಳಿಸಿದರು.

ನಂತರ ಹೊರಬಂದ ವಿಕ್ರಂ ಸಿಂಹ, ‘ಸತ್ಯಕ್ಕೆ ಜಯ ಸಿಕ್ಕಿದೆ. ನಾನು ಕೃಷಿ ಮಾಡಲು ಅಲ್ಲಿಗೆ ಹೋದವನು. ನಮ್ಮ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT