ಮನೆಗೆ ನುಗ್ಗಿ ಮಚ್ಚಿನಿಂದ ಕೊಚ್ಚಿ ಕೊಲೆ

ಹಿರೀಸಾವೆ: ತೋಟದ ಮನೆಗೆ ನುಗ್ಗಿದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹೋಬಳಿಯ ಕಮರವಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ದಿವಂಗತ ದೊಡ್ಡೇಗೌಡರ ಮಗ ಲಿಂಗರಾಜು (43) ಕೊಲೆಯಾದ ವ್ಯಕ್ತಿ. ಮಂಗಳವಾರ ರಾತ್ರಿ ಸುಮಾರು 9-45ರ ಸಮಯದಲ್ಲಿ ಎಂಟ್ಹತ್ತು ಜನರಿದ್ದ ತಂಡ ಮನೆಯ ಬಾಗಿಲನ್ನು ಒಡೆದು ಒಳನುಗ್ಗಿ ಹಾಲ್ನಲ್ಲಿ ಮಲಗಿದ್ದ ಲಿಂಗರಾಜುವಿನ ತಲೆಯನ್ನು ಸುತ್ತಿಗೆಯಿಂದ ಹೊಡೆದು, ಕುತ್ತಿಗೆ ಮತ್ತು ದೇಹವನ್ನು ಲಾಂಗ್ನಿಂದ ಕೊಚ್ಚಿದ್ದಾರೆ.
ಗಲಾಟೆಗೆ ಮನೆಯ ಮೇಲೆ ಮಲಗಿದ್ದ ಲಿಂಗರಾಜು ಅಣ್ಣ ಮಗ ಸುದರ್ಶನ್ ಕೆಳಗೆ ಬಂದಾಗ ಆವನ ಮೇಲೆಯೂ ಹಲ್ಲೆ ಮಾಡಿ, ಬೆದರಿಕೆ ಹಾಕಿದ್ದಾರೆ. ನಂತರ ಕಾರು ಮತ್ತು ಬೈಕ್ಗಳಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಬೆಂಗಳೂರಿನ ಶಾಂತಿನಗರ, ಬಸಪ್ಪ ರಸ್ತೆ, ರಾಚಪ್ಪ ಗಾರ್ಡನ್ ಹತ್ತಿರ ವಾಸಿಯಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಲಾಕ್ಡೌನ್ ಆದಾಗಿನಿಂದ ಹೋಬಳಿಯ ಕಮರವಳ್ಳಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಮಕ್ಕಳಿಗೆ ಆನ್ಲೈನ್ ತರಗತಿ ಆರಂಭವಾದ ಹಿನ್ನೆಲೆಯಲ್ಲಿ ಲಿಂಗರಾಜು ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿಗೆ ಹೋಗಿದ್ದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಎಎಸ್ಪಿ ನಂದಿನಿ, ಡಿವೈಎಸ್ಪಿ ಲಕ್ಷ್ಮೇಗೌಡ, ಸಿಪಿಐ ಕುಮಾರ್, ಎಸ್ಐ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.