ಶುಕ್ರವಾರ, ಫೆಬ್ರವರಿ 26, 2021
24 °C

ನಾನೇ ಮಾಡಿದ್ದು ಎನ್ನುವ ಗರ್ವ ಇರಬಾರದು: ಮೋದಿಗೆ ಎಚ್‌.ಡಿ.ದೇವೇಗೌಡ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಕಳೆದ ಐದು ವರ್ಷದಲ್ಲಿ ಎಲ್ಲವನ್ನೂ ಮಾಡಿದ್ದೇನೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಹಾಗಿದ್ದರೆ ಬೇರೆಯವರು ಏನೂ ಮಾಡಿಲ್ಲವೇ’ ಎಂದು ಸಂಸದ ಎಚ್‌.ಡಿ.ದೇವೇಗೌಡ ಪ್ರಶ್ನಿಸಿದರು.

ಹೊಳೆನರಸೀಪುರದಲ್ಲಿ ನಡೆದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇಂಥಹ ಮಾತು ಅವರ ಸ್ಥಾನಕ್ಕೆ ತಕ್ಕುದಾದುದಲ್ಲ. ಎಂತೆಂಥವರೋ ಬಂದು ಹೋಗಿದ್ದಾರೆ. ಯಾರಿಗೇ ಆಗಲಿ, ನಾನೇ ಮಾಡಿದ್ದು ಎನ್ನುವ ಗರ್ವ ಇರಬಾರದು. ಮುಂದೆ ಗರ್ವಭಂಗ ಆಗಲಿದೆ’ ಎಂದು ಎಚ್ಚರಿಸಿದರು.

‘ನನ್ನನ್ನು ಸೋ ಕಾಲ್ಡ್ ಸನ್ ಆಫ್ ಸಾಯಿಲ್’ ಎಂದು ಗೇಲಿ ಮಾಡ್ತಾರೆ. ಮಣ್ಣಿನ ಮಗ ಎನ್ನುವುದು ನನಗೆ ಯಾವುದೇ ಸರ್ಕಾರ ಕೊಟ್ಟ ಬಿರುದಲ್ಲ. ಜನರು ಕೊಟ್ಟಿದ್ದನ್ನು ಯಾರೂ ತಡೆಯಲು ಆಗುವುದಿಲ್ಲ’ ಎಂದು ತಿರುಗೇಟು ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಈ ಹಿಂದೆಯೇ ಭರವಸೆ ನೀಡಿದಂತೆ ₹ 2 ಲಕ್ಷದವರೆಗೆ ರೈತರ ಸಾಲವನ್ನು ಮನ್ನಾ ಮಾಡಲಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಶಿಷ್ಟಾಚಾರ ಪಾಲನೆ ಕಾರಣದಿಂದ ಕೊಂಚ ಹಿಂದೇಟು ಹಾಕಿದ್ದರಿಂದ ತಡವಾಗಿದೆ. ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಸಾಲಮನ್ನಾ ಪ್ರಸ್ತಾಪ ಜೊತೆಗೆ ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಉಳಿಸಿಕೊಂಡು ಉತ್ತಮ ಬಜೆಟ್ ಮಂಡಿಸಿದ್ದಾರೆ’ ಎಂದು ಗುಣಗಾನ ಮಾಡಿದರು.

ಕೇಂದ್ರ ಬಜೆಟ್ ಅಧಿವೇಶನವನ್ನು ಕೇವಲ 9 ದಿನಗಳಿಗೆ ಸೀಮಿತಗೊಳಿಸುವ ಪ್ರಧಾನಿ ಅವರ ಕ್ರಮಕ್ಕೆ ಗೌಡರು ಅಸಮಾಧಾನ ಹೊರಹಾಕಿದರು.

‘ಇಂಥ ಸನ್ನಿವೇಶ ನನ್ನ 60 ವರ್ಷದ ರಾಜಕೀಯದಲ್ಲಿ ನೋಡಿದ್ದು ಇದೇ ಮೊದಲು. ಇಷ್ಟು ಕಡಿಮೆ ದಿನದಲ್ಲಿ ಏನೂ ಮಾತನಾಡಲು ಸಾಧ್ಯವಿಲ್ಲ. ಆದರೂ ನಾಳೆಯ ಅಧಿವೇಶನದಲ್ಲಿ ಮಾತನಾಡಲಿದ್ದೇನೆ’ ಎಂದರು.

ಪಶ್ಚಿಮ ಬಂಗಾಳ ಸಿ.ಎಂ ಮತ್ತು ಕೇಂದ್ರದ ನಡುವಿನ ಜಟಾಪಟಿ ಕುರಿತ ಪ್ರಶ್ನೆಗೆ, ಚುನಾವಣೆ ವೇಳೆ ಇಂಥ ಪ್ರತೀಕಾರದ ರಾಜಕೀಯ ಸಾಮಾನ್ಯ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು