ಮಂಗಳವಾರ, ಜನವರಿ 28, 2020
23 °C
ಒಕ್ಕಲಿಗ ಸಮುದಾದಯ ಹುಲ್ಲಳ್ಳಿ ಸುರೇಶ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ

ಹಾಸನ ಬಿಜೆಪಿಗೆ ಹೊಸ ಸಾರಥಿ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅಂತೂ ಇಂತೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಭರ್ತಿಯಾಗಿದ್ದು, ಹಿರಿಯ ಮುಖಂಡ, ಉದ್ಯಮಿ ಎಚ್‌.ಕೆ.ಸುರೇಶ್‌ (ಹುಲ್ಲಳ್ಳಿ ಸುರೇಶ್‌) ಅವರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ವೀಕ್ಷಕರಾದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಕಾರ್ಯದರ್ಶಿ ಮುನಿರಾಜೇಗೌಡ, ವಿಭಾಗ ಸಹ ಪ್ರಭಾರಿ ಪ್ರೀತಂ ಜೆ ಗೌಡ ಅವರು ಭಾನುವಾರ ಪಕ್ಷದ ವಿವಿಧ ಮಂಡಳಗಳ ಅಧ್ಯಕ್ಷರು, ಜಿಲ್ಲಾ ಕೋರ್ ಸಮಿತಿ ಸದಸ್ಯರ ಅಭಿಪ್ರಾಯ ಪಡೆದು ಸರ್ವಾನುಮತದಿಂದ ಸುರೇಶ್‌ ಅವರನ್ನು ಆಯ್ಕೆ ಮಾಡಿದರು.

ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಲು ವರಿಷ್ಠರು ನಿರ್ಧರಿಸಿದ್ದ ಕಾರಣ ಎಚ್‌.ಕೆ.ಸುರೇಶ್‌ ಹಾಗೂ ಎಚ್‌.ಎಂ.ಸುರೇಶ್‌ ಕುಮಾರ್ ನಡುವೆ ಪ್ರಬಲ ಪೈಪೋಟಿ ಇತ್ತು. ಇವರೊಂದಿಗೆ ಅರಸೀಕೆರೆಯ ವೀರಶೈವ ಲಿಂಗಾಯತ ಸಮುದಾಯದವರಾದ ಮುಖಂಡ ಜಿವಿಟಿ ಬಸವರಾಜ್‌ ಮತ್ತು ಬೇಲೂರು ತಾಲ್ಲೂಕಿನ ಬಿ.ಎಚ್‌.ರೇಣುಕುಮಾರ್‌ ಹೆಸರು ಪ್ರಸ್ತಾಪವಾಯಿತು. ಅಂತಿಮವಾಗಿ ವರಿಷ್ಠರು ಹೊಸ ಮುಖಕ್ಕೆ ಅವಕಾಶ ನೀಡಿದ್ದಾರೆ.

ಕಾಂಗ್ರೆಸ್‌ನಿಂದ ವಲಸೆ ಬಂದಿದ್ದ ಎ.ಮಂಜು ಅವರಿಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡಿದ್ದರಿಂದ ಮುನಿಸಿಕೊಂಡು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಯೋಗಾ ರಮೇಶ್‌ ರಾಜೀನಾಮೆ ನೀಡಿದ್ದರು. ನಂತರ  ಅವರು ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ವರಿಷ್ಠರು ಪ್ರಭಾರಿ ಅಧ್ಯಕ್ಷರಾಗಿ ನವಿಲೆ ಅಣ್ಣಪ್ಪ ಅವರನ್ನು ನೇಮಿಸಿದ್ದರು.

ಹಾಸನ ತಾಲ್ಲೂಕಿನ ಹುಲ್ಲಳ್ಳಿ ಗ್ರಾಮದ ಎಚ್‌.ಕೆ.ಸುರೇಶ್‌ ಅವರು ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಹುಲ್ಲಳ್ಳಿ ಸುರೇಶ್‌ ಎಂದೇ ಪರಿಚಿತ. ಜೆಡಿಎಸ್‌ ಪಕ್ಷದಿಂದ ರಾಜಕೀಯ ಆರಂಭಿಸಿ, ಕೆಲ ವರ್ಷ ನಂತರ ಬಿಜೆಪಿ ಸೇರಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಒಕ್ಕಲಿಗ ಸಮುದಾಯದ ಇವರು ವೃತ್ತಿಯಿಂದ ಗುತ್ತಿಗೆದಾರರಾಗಿದ್ದು, ಹಾಸನದಲ್ಲಿ ಎಚ್‌ಕೆಎಸ್‌ ವಸತಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ.

2008ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಬೇಲೂರು ವಿಧಾನಸಭಾ ಕ್ಷೇತ್ರದತ್ತ ಚಿತ್ತ ಹರಿಸಿದ ಅವರು ಪಕ್ಷದ ಸಂಘಟನೆಗೆ ಒತ್ತು ನೀಡಿದರು. 2018ರಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಸ್ಥಾನದೊಂದಿಗೆ ಮತ್ತೊಮ್ಮೆ ಪರಾಭವಗೊಂಡರು.

ಸೋತರೂ ಕ್ಷೇತ್ರದ ನಂಟು ಬಿಡದ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಆರ್ಥಿಕವಾಗಿ ಪ್ರಬಲವಾಗಿದ್ದು, ರಾಜ್ಯ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಕ್ಷಕ್ಕೆ ಒತ್ತಾಸೆಯಾಗಬಹುದು ಎನ್ನುವುದು ಸುರೇಶ್‌ ಅವರ ಆಯ್ಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು