ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ನೊಂದು ಮಠಕ್ಕೆ ಸಹಕಾರ ನೀಡಿದ್ದೇವೆ, ಪರ್ಯಾಯ ಮಠ ಕಟ್ಟಿಲ್ಲ: ಕುಮಾರಸ್ವಾಮಿ

Published 11 ಏಪ್ರಿಲ್ 2024, 13:33 IST
Last Updated 11 ಏಪ್ರಿಲ್ 2024, 13:33 IST
ಅಕ್ಷರ ಗಾತ್ರ

ಹಾಸನ: ‘ದೊಡ್ಡ ಸಮಾಜವಿದೆ. ಇನ್ನೊಬ್ಬ ಸ್ವಾಮೀಜಿಯ ಆಶೀರ್ವಾದ ಸಿಗಲೆಂಬ ಉದ್ದೇಶದಿಂದ ಇನ್ನೊಂದು ಮಠಕ್ಕೆ ಸಹಕಾರ ನೀಡಿದ್ದೇವೆ. ಪರ್ಯಾಯ ಮಠ ಮಾಡಿಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಜಿಲ್ಲೆಯ ರಾಮನಾಥಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಶ್ವ ಒಕ್ಕಲಿಗರ ಸಂಘದ ಕೆ.ಆರ್‌.ಪೇಟೆ ಕೃಷ್ಣ ಸೇರಿದಂತೆ ಹಲವರು, ಮತ್ತೊಂದು ಮಠ ಇರಲಿ ಎಂದು ಬಂದರು. ಬೇರೆ ಸಮಾಜದ ಎಷ್ಟು ಮಠಗಳಿಲ್ಲ? ನಮ್ಮ ಸಮಾಜವೂ ವಿಸ್ತಾರಗೊಳ್ಳಲಿ ಎಂಬ ಉದ್ದೇಶದಿಂದ, ಇನ್ನೊಂದು ಮಠ ಬೆಳೆಯಲಿ ಎಂದು ಸಹಕಾರ ನೀಡಿದ್ದೇವೆ. ಅದು ತಪ್ಪಾ’ ಎಂದು ಪ್ರಶ್ನಿಸಿದರು.  

‘ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ, 140 ಸಣ್ಣ ಮಠಾಧೀಶರಿಗೆ ₹130 ಕೋಟಿ ಆರ್ಥಿಕ ನೆರವು ನೀಡಿದ್ದೇನೆ. ನನಗೆ ಇದೇನು ಹೊಸದಲ್ಲ’ ಎಂದರು.

‘ರಾಜಕೀಯದಲ್ಲಿ ಇನ್ನೊಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ದೇವರ ಆಶೀರ್ವಾದವಿದ್ದರೆ, ನಿಮ್ಮ ಸೇವೆ ಮಾಡಲು ಅವಕಾಶ ಸಿಗುತ್ತದೆ. ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ, ನಿಮ್ಮೆಲ್ಲರ ಆಶೀರ್ವಾದದಿಂದ ಮೂರನೇ ಜನ್ಮ ಪಡೆದಿದ್ದೇನೆ’ ಎಂದರು.

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಬಗ್ಗೆ ಅಸೂಯೆ ಇಲ್ಲ. ಆದರೆ ರಾಜ್ಯವನ್ನು ಯಾವ ಕಡೆಗೆ ಕೊಂಡೊಯುತ್ತಾರೆಂಬ ಆತಂಕವಿದೆ. ಗ್ಯಾರಂಟಿ ಯೋಜನೆಗೆ ಅವರೇನು ದುಡಿದು ಕೊಡುತ್ತಿಲ್ಲ. ನಿಮ್ಮ ದುಡ್ಡನ್ನು ನಿಮಗೆ ಕೊಡುತ್ತಿದ್ದಾರಷ್ಟೇ. ₹1.05 ಲಕ್ಷ ಕೋಟಿ ಸಾಲ ಮಾಡಿದ್ದು, ಅದರಲ್ಲಿ ₹58 ಸಾವಿರ ಕೋಟಿ ನಿಮಗೆ ಕೊಡುತ್ತಿದ್ದಾರೆ. ₹6.87 ಲಕ್ಷ ಕೋಟಿ ಸಾಲ ತೀರಿಸೋರು ಯಾರು? ಇವತ್ತು ಇರುತ್ತಾರೆ, ನಾಳೆ ಹೋಗುತ್ತಾರೆ. ಆಮೇಲೆ ನೀವೇ ತೀರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT