ಶನಿವಾರ, ಮೇ 21, 2022
27 °C

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ವಿಜಯೇಂದ್ರ ಭವಿಷ್ಯದ ಸಿ.ಎಂ: ಪ್ರೀತಂ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತೇ ಇಲ್ಲ. 2023ರ ವರೆಗೆ ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತಾರೆ ಎಂಬುದನ್ನು ರಕ್ತದಲ್ಲಿ ಬರೆದು ಕೊಡುವೆ. ಅವರ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಲಾಗುವುದು’ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶಾಸಕಾಂಗ ಸಭೆ ನಡೆದಿದೆಯೋ, ಇಲ್ಲವೋ ಎಂಬ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಮಾಹಿತಿ ಇಲ್ಲ. ಏಕೆಂದರೆ ಗೋಪಾಲಯ್ಯ ಅವರು ಹಾಸನದಲ್ಲಿಯೇ ಇದ್ದಾರೆ. 20 ಅಲ್ಲ 40 ಶಾಸಕರು ದೆಹಲಿಯಲ್ಲಿ ಇದ್ದರೂ ಯಾವುದೇ ಬದಲಾವಣೆ ಆಗಲ್ಲ. ಕೋವಿಡ್‌ ಸಂದಿಗ್ಧ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾರಾದರೂ ಮಾತನಾಡಿದರೆ ಜನರ ಟೀಕೆಗೆ ಗುರಿ ಆಗುತ್ತಾರೆ’ ಎಂದು ತಿಳಿಸಿದರು.

‘ಬೇರೆ ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ವಕ್ತಾರ ಆಗುವುದಿಲ್ಲ. ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು. ಅವರು ನಾಯಕತ್ವದಲ್ಲಿ ರಾಜ್ಯ ಅಭಿವೃದ್ಧಿ ಹೊಂದಲಿದೆ. ಬಿ.ವೈ. ವಿಜಯೇಂದ್ರ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಅವರ ನೇತೃತ್ವದಲ್ಲಿ ಚುನಾವಣೆ ನಡೆದು ಅಧಿಕಾರಕ್ಕೆ ಬರುವ ಕಾಲವು ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದೇವೆ’ ಎಂದರು.

ಹಾಗಾಗಿ ಈ ಅವಧಿಯಲ್ಲಿ ಯಾರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತು ಬರುವುದಿಲ್ಲ. ಕೋವಿಡ್‌ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಬಿಜೆಪಿ ಶಾಸಕರು ಅವರೊಂದಿಗೆ ಇದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು, ಎಚ್‌.ಡಿ. ರೇವಣ್ಣ ಅವರ ಸಹಕಾರದಿಂದ ಎಲ್ಲಾ ಸಲಕರಣೆಯನ್ನು ತಂದಿದ್ದೇವೆ. ಆಡಳಿತ ಪಕ್ಷದ ಶಾಸಕನಾಗಿ ಸರ್ಕಾರದ ನಡುವೆ ಕೊಂಡಿಯಾಗಿ‌ ಕೆಲಸ ಮಾಡಿದ್ದೇನೆ. ಕೊರೊನಾ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೇವೇಗೌಡರ ಕೊಡುಗೆ ಹೆಚ್ಚು. ಅವರ ಸಲಹೆಗೆ ಸಹಮತ ವ್ಯಕ್ತಪಡಿಸಿದ್ದೇನೆ. ಮಧ್ಯವರ್ತಿಯಾಗಿ, ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ಎಲ್ಲವೂ ನನ್ನಿಂದಲೇ ಆಗಿದೆ ಎಂದು ಹೇಳಿಲ್ಲ’ ಎಂದು ಪ್ರೀತಂ ಸ್ಪಷ್ಟಪಡಿಸಿದರು.

ಮೊಸರಲ್ಲಿ ಕಲ್ಲು ಹುಡುಕುವ ಕೆಲಸ‌ವಾಗಬಾರದು. ನಮ್ಮ‌ ಕ್ಯಾಪ್ಟನ್ ರೇವಣ್ಣ, ರಾಜಕಾರಣ ಮಾಡುವಾಗ ಯಾರಿಗೂ ಹೆದರುವುದಿಲ್ಲ. ರೇವಣ್ಣ ವಿರುದ್ಧವೂ ರಾಜಕೀಯ ಮಾಡುತ್ತೇನೆ. ಆದರೆ, ಈ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಅವರ ನೇತೃತ್ವದಲ್ಲೇ ಕೊರೊನಾ ನಿಯಂತ್ರಣಕ್ಕೆ ಹೋರಾಡುತ್ತೇವೆ ಎಂದರು.

ಇದನ್ನೂ ಓದಿ... ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು