ಹಾಸನ: ಜಿಲ್ಲೆಯಲ್ಲಿ ಈಗಾಗಲೇ ಪೂರ್ಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ' ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫೆ.24 ರಂದು ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚನ್ನಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ವಿಹಾರಧಾಮ, ಅರಸೀಕೆರೆ ತಾಲ್ಲೂಕಿನ ಮಾಲೆಕಲ್ ತಿರುಪತಿಯಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ, ಅಬಕಾರಿ ಇಲಾಖೆ ಕಚೇರಿ ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಗೆ ಸಿದ್ದತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ವಿವಿಧ ಅಭಿವೃದ್ಧಿ ನಿಗಮಗಳು ಹಾಗೂ ವಿವಿಧ ಇಲಾಖೆಗಳಲ್ಲಿ ಸವಲತ್ತು ವಿತರಣೆಗೆ ಆಯ್ಕೆ ಆಗಿರುವ ಫಲಾನುಭವಿಗಳ ಪಟ್ಟಿ ತಯಾರಿಸಬೇಕು. ಹೊಸದಾಗಿ ರಚನೆಯಾಗಿರುವ ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ನಿರ್ಮಿಸುತ್ತಿರುವ 41 ಮನೆಗಳನ್ನು ಪೂರ್ಣಗೊಳಿಸಿ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ನಗರದ ರಸ್ತೆಗಳ ಗುಂಡಿ ಮುಚ್ಚುವುದರ ಜೊತೆಗೆ ನಗರ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ ಸತ್ಯಭಾಮಾ' ನಗರೋತ್ಥಾನ, ಇಂದಿರಾ ಕ್ಯಾಂಟೀನ್, ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿ, ಶೇ.100 ರಷ್ಟು ಗುರಿ ಸಾಧಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.