ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 67 ಮಂದಿಗೆ ಕೋವಿಡ್‌

ಕೋವಿಡ್‌ ಬಾಧಿತರ ಸಂಖ್ಯೆ 953ಕ್ಕೆ ಏರಿಕೆ, ಮಧುಮೇಹ ಇದ್ದ ವ್ಯಕ್ತಿ ಸಾವು
Last Updated 20 ಜುಲೈ 2020, 14:14 IST
ಅಕ್ಷರ ಗಾತ್ರ

ಹಾಸನ: ಸೋಮವಾರ ಒಂದೇ ದಿನ 67 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 953ಕ್ಕೆ ಏರಿಕೆ ಆಗಿದೆ. ಇದರೊಂದಿಗೆ ಕೋವಿಡ್‌ ಪ್ರಕರಣ ಸಾವಿರ ಗಡಿಯತ್ತ ಸಾಗಿದೆ.

ಸಕ್ಕರೆ ಕಾಯಿಲೆ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಾಸನ ತಾಲ್ಲೂಕಿನ 42 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಹಿಮ್ಸ್‌ಗೆ ದಾಖಲಾಗಿದ್ದ ಪುರುಷನಿಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸರ್ಕಾರದ ನಿರ್ದೇಶನದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಈವರೆಗೆ ಚೇತರಿಸಿಕೊಂಡು 569 ಜನರು ಬಿಡುಗಡೆ ಆಗಿದ್ದು, ಸಕ್ರಿಯ ಪ್ರಕರಣ 355ಕ್ಕೆ ಏರಿಕೆ ಆಗಿದೆ. 17 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ 29 ಜನರು ಸಾವಿಗೀಡಾಗಿದ್ದಾರೆ.

ಬೆಂಗಳೂರು ಪ್ರಯಾಣ ಇತಿಹಾಸ ಹೊಂದಿದ 21 ಜನರಿಗೆ ಸೋಂಕು ಪತ್ತೆಯಾಗಿದೆ. ಕೊಡಗು ಪ್ರಯಾಣ ಬೆಳೆಸಿದ
ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ, ಬಿಹಾರದಿಂದ ಮರಳಿದ ವ್ಯಕ್ತಿ, ಆಂದ್ರಪ್ರದೇಶದಿಂದ ಬಂದ ಅರಸೀಕೆರೆ ತಾಲ್ಲೂಕಿನ ಇಬ್ಬರು, ಶೀತ ಜ್ವರ ಮಾದರಿ ಅನಾರೋಗ್ಯ ಇರುವ 29 ಜನರಿಗೆ ಸೋಂಕು ತಗುಲಿದೆ. ಸೋಂಕಿತ ಸಂಪರ್ಕದಿಂದ ಆಲೂರು ತಾಲ್ಲೂಕಿನ 8 ವರ್ಷದ ಗಂಡು ಮಗು, ಹೊಳೆನರಸೀಪುರ ತಾಲ್ಲೂಕಿನ 3 ವರ್ಷದ ಮಗು ಹಾಗೂ ಅರಕಲಗೂಡು ತಾಲ್ಲೂಕಿನ 6 ವರ್ಷದ ಮಗುವಿಗೂ ಪಾಸಿಟಿವ್‌ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್ ತಿಳಿಸಿದರು.

ಆಲೂರು ತಾಲ್ಲೂಕಿನಲ್ಲಿ 8, ಅರಕಲಗೂಡು 11, ಅರಸೀಕೆರೆ 6, ಬೇಲೂರು 8, ಚನ್ನರಾಯಪಟ್ಟಣ 3, ಹಾಸನ 23 ಹಾಗೂ ಹೊಳೆನರಸೀಪುರ ತಾಲ್ಲೂಕಿನ 8 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಎಲ್ಲರೂ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕೊರೊನಾ ನಿಯಂತ್ರಣ ವಿಚಾರದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಶಕ್ತಿಮೀರಿ ಶ್ರಮಿಸುತ್ತಿದ್ದು, ಅಧಿಕಾರಿಗಳು ನಿರ್ಲಕ್ಷ್ಯ
ತೋರುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ತಾಲ್ಲೂಕಿನ ಸುಂಡಹಳ್ಳಿ ಗ್ರಾಮಕ್ಕೆ ಹೊರಗಡೆಯಿಂದ ಬಂದಿದ್ದ ಇಬ್ಬರಿಗೆ ಪಾಸಿಟಿವ್‌ ಬಂದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆ ಕರೆತರಲಾಗಿದೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್‌ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿಲ್ಲ ಎಂಬ ಸುದ್ದಿ ಹರಿಬಿಡಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT