ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ವಂಚನೆ: ₹11.32 ಲಕ್ಷ ವರ್ಗಾವಣೆ

Published 21 ಮೇ 2024, 13:34 IST
Last Updated 21 ಮೇ 2024, 13:34 IST
ಅಕ್ಷರ ಗಾತ್ರ

ಹಾಸನ: ಮೀಶೋ ಆನ್‌ಲೈನ್‌ ಶಾಪಿಂಗ್‌ನ ಲಕ್ಕಿ ವಿಜೇತರು ಎಂದು ನಂಬಿಸಿ, ಚನ್ನರಾಯಪಟ್ಟಣ ತಾಲ್ಲೂಕಿನ ಬಿಚ್ಚಗೋಡನಹಳ್ಳಿಯ ವ್ಯಕ್ತಿಯೊಬ್ಬರ ಖಾತೆಯಿಂದ ₹ 11.32 ಲಕ್ಷ ವರ್ಗಾವಣೆ ಮಾಡಿಕೊಂಡು ಆನ್‌ಲೈನ್‌ ವಂಚನೆ ಮಾಡಲಾಗಿದೆ.

ಗ್ರಾಮದ ರಮೇಶ ಅವರು ಚನ್ನರಾಯಪಟ್ಟಣ ಎಸ್‌ಬಿಐ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಅವರ ಪತ್ನಿ ಲತಾ ಅವರ ವಿಳಾಸದಲ್ಲಿ ಅಂಚೆ ಮೂಲಕ ಪತ್ರ ಬಂದಿದ್ದು, ಮೀಶೋ ಆನ್‌ಲೈನ್ ಶಾಪಿಂಗ್‍ನ 8ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಂಪನಿಯು ಗ್ರಾಹಕರಿಗಾಗಿ ಆಯೋಜಿಸಿದ್ದ ಲಕ್ಕಿ ಡ್ರಾದಲ್ಲಿ ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಕಳುಹಿಸಿರುವ ಕೂಪನ್ ಸ್ಕ್ರ್ಯಾಚ್ ಮಾಡಿದಾಗ ನೀವು ಬಹುಮಾನ ಗೆದ್ದರೆ ಸಣ್ಣ ಪರಿಶೀಲನೆ ಪ್ರಕ್ರಿಯೆ ಇರುತ್ತದೆ ಎಂದು ಬರೆಯಲಾಗಿತ್ತು.

ಅದರಂತೆ ಕೂಪನ್ ಅನ್ನು ಸ್ಕ್ರ್ಯಾಚ್ ಮಾಡಿ ನೋಡಿದಾಗ, 1ನೇ ಬಹುಮಾನ ₹ 15,51,000 ನಗದು ಬಹುಮಾನ ಎಂದು ಬರೆಯಲಾಗಿತ್ತು. ಪರಿಶೀಲನೆ ಪ್ರಕ್ರಿಯೆಗಾಗಿ ರಮೇಶ್‌ ಹಾಗೂ ಪತ್ನಿಯ ಆಧಾರ್ ಕಾರ್ಡ್‌, ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಫೋಟೊ ಪ್ರತಿಯನ್ನು 6289845389 ಸಂಖ್ಯೆಯ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದಾರೆ.

ಪತ್ರದಲ್ಲಿದ್ದ ಸಿಆರ್‌ಒ ಅಧಿಕಾರಿ ರಾಘವೇಂದ್ರ ಎಂಬುವವರ ಮೊಬೈಲ್‌ಗೆ ಕರೆ ಮಾಡಿದ್ದು, ನೀವು ದೊಡ್ಡ ಬಹುಮಾನ ಗೆದ್ದಾಗ, ಅದರ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದು, ಅದರಂತೆ ವಿವಿಧ ಖಾತೆಗಳಿಗೆ ಆನ್‍ಲೈನ್ ಮೂಲಕ ಒಟ್ಟು ₹ 11,32,939 ವರ್ಗಾವಣೆ ಮಾಡಿಕೊಂಡಿದ್ದಾರೆ.

ಇದುವರೆಗೂ ಯಾವುದೇ ಹಣ ವಾಪಸ್ ಬರದೇ ಇದ್ದುದರಿಂದ ನುಗ್ಗೇಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ವ್ಯಾನಿಟಿ ಬ್ಯಾಗ್‌ನಲ್ಲಿ ಚಿನ್ನಾಭರಣ ಕಳವು

ಹಾಸನ: ನಗರದ ಸಿಟಿ ಬಸ್‌ ನಿಲ್ದಾಣದಿಂದ ಹೊಸ ಬಸ್‌ ನಿಲ್ದಾಣಕ್ಕೆ ಪ್ರಯಾಣಿಸಿದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 30 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ.

ಮೈಸೂರಿನ ಹಿನಕಲ್‌ನ ವಿಮಲಾ ಎಂಬುವವರು, ತಮ್ಮ ಮಕ್ಕಳೊಂದಿಗೆ ಹಾಸನ ಸಿಟಿ ಬಸ್ ನಿಲ್ದಾಣದಿಂದ ಸಿಟಿ ಬಸ್‍ನಲ್ಲಿ ಹೊಸ ಬಸ್‍ ನಿಲ್ದಾಣಕ್ಕೆ ಹೋಗಿದ್ದಾರೆ. ಅಲ್ಲಿ ಬಸ್‌ ಇಳಿದು, ತಮ್ಮ ಬ್ಯಾಗ್ ನೋಡಿದಾಗ, ಒಳಗಿದ್ದ ₹ 90 ಸಾವಿರ ಮೌಲ್ಯದ 30 ಗ್ರಾಂ ಚಿನ್ನಾಭರಣಗಳು ಕಳವಾಗಿರುವುದು ಗೊತ್ತಾಗಿದೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT