ಹಾಸನ: ಸೆ. 14ರಂದು ಹಿಂದಿ ದಿವಸ್ ಆಚರಣೆ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಹಿಂಪಡೆ ಯಬೇಕು ಎಂದು ಜಯಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮಶೇಖರ್ ನೇತೃತ್ವದ ನಿಯೋಗ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರಿಗೆ ಮನವಿ ಸಲ್ಲಿಸಿ,ಸೆ.14 ರಂದು ಹಿಂದಿ ದಿವಸ್ ಆಚರಿಸುವ ಕುರಿತು ಕೇಂದ್ರ ಹೊರಡಿಸಿರುವ ಪ್ರಕಟಣೆಗೆ ರಾಜ್ಯ ಸರ್ಕಾರ ಬೆಂಬಲ ಸೂಚಿಸಿದೆ. ಭಾರತದ ಸಂವಿಧಾನ 350ನೇ ವಿಧಿ ಪ್ರಕಾರ, ಪ್ರತಿ ರಾಜ್ಯ ಸರ್ಕಾರ ಆಡಳಿತ ಭಾಷೆಯಾಗಿ ತನ್ನ ಮಾತೃಭಾಷೆಯನ್ನೆ ಬಳಸಬೇಕು ಹಾಗೂ ಕಡ್ಡಾಯವಾಗಿ ಅಲ್ಲಿನ ಮಕ್ಕಳಿಗೆ ಮತ್ತು ನಾಗರಿಕರಿಗೆ ಶಿಕ್ಷಣದಲ್ಲಿ ಸಾರ್ವತ್ರಿಕವಾಗಿ ತನ್ನ ಮಾತೃಭಾಷೆಗೆ ಒತ್ತು ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದೆ ಎಂದು ತಿಳಿಸಿದರು.
ಸಂವಿಧಾನದಲ್ಲಿ ಎಲ್ಲಿಯೂ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖಿಸಿಲ್ಲ. ಆದರೂ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮೇಲೂ ಹಿಂದಿ ಹೇರುತ್ತಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡಿದ ದ್ರೋಹ ಹಾಗೂ ರಾಜ್ಯಗಳ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಿಂದಿ ದಿವಸ್‌ಗೆ ಬೆಂಬಲ ನೀಡದೆ, ಕನ್ನಡಿಗರ ಸಾರ್ವಭೌತ್ವವನ್ನು ಎತ್ತಿಹಿಡಿಯಬೇಕು. ಇಲ್ಲವಾದರೆ ಜಯ ಕರ್ನಾಟಕ ಸಂಘಟನೆಯು ರಾಜ್ಯದ ಪ್ರತಿ ಗ್ರಾಮಗಳಲ್ಲಿಯು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಚ್ಚರಿಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಂ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಯಕರ್ನಾಟಕ ಜಿಲ್ಲಾ ಸಂಚಾಲಕ ಬಿ.ಎಲ್.ಲಕ್ಷ್ಮಣ್, ರಾಜು ಹಾಗೂ ಇತರರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.