ಕೊಣನೂರು: ‘ನಮಗೆ ನ್ಯಾಯ ಸಿಗುವವರೆಗೂ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ’ ಎಂದು ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಸಂಸ್ಥಾಪಕ ಅಧ್ಯಕ್ಷ ಎಸ್.ರಾಘವೇಂದ್ರ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ಮೂಲಕ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ರಾಜ್ಯ ಹೆದ್ದಾರಿ ನಿರ್ಮಾಣದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಸಿದ್ದಾಪುರ ಗೇಟ್ ಸರ್ಕಲ್‌ನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯಿಂದ ಮಂಗಳವಾರದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
‘ರಾಮನಾಥಪುರ ಹೋಬಳಿ ಹಾಗೂ ಕೊಣನೂರು ಹೋಬಳಿಗಳ ವ್ಯಾಪ್ತಿಯಲ್ಲಿ ಕೆಶಿಫ್-3 ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಮಾಗಡಿಯಿಂದ ಸೋಮವಾರಪೇಟೆ ಮಾಡಲಾಗುತ್ತಿದೆ. ಈ ಕಾಮಗಾರಿಯಲ್ಲಿ ಅನೇಕ ಲೋಪದೋಷಗಳು ಇರುವುದರಿಂದ ಅಪಘಾತಕ್ಕೆ ಕಾರಣವಾಗಿದೆ’ ಎಂದು ದೂರಿದರು.
‘ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ. ಕೆಲಭಾಗದಲ್ಲಿ ಹೆದ್ದಾರಿಯ ಬದಿ ಚರಂಡಿ ನಿರ್ಮಾಣ ಮಾಡಿಲ್ಲ. ಮೊದಲಿನ ರಸ್ತೆಯಲಿದ್ದ ಬಸ್ ತಂಗುದಾಣಗಳನ್ನು ಒಡೆದು ಹಾಕಿದ್ದು ಮರು ನಿರ್ಮಾಣ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಭೂ–ಸ್ವಾಧೀನಕ್ಕೆ ಪರಿಹಾರ ಕೊಡದೇ ರಸ್ತೆ ಕಾಮಗಾರಿ ಮಾಡಿದ್ದು, ಈ ವಿಚಾರವಾಗಿ ಈಗಾಗಲೇ ಅನೇಕ ಹೋರಾಟ ಮಾಡಲಾಗಿದೆ. ಸರ್ಕಾರ ಹಾಗೂ ಅಧಿಕಾರಗಳ ಗಮನಕ್ಕೆ ಸೆಳೆದಿದ್ದರೂ ಇದುವರೆಗೂ ಲೋಪಗಳು ಸರಿಯಾಗಿಲ್ಲ. ಪರಿಹಾರದ ಕೊಡದೇ ಬಡ ಜನರಿಗೆ ತೊಂದರೆ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ, ನೊಂದವರು, ರೈತರ ಪರವಾಗಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ, ಕೆಶಿಫ್ ಅಧಿಕಾರಿಗಳು ಬರಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳು, ರೈತರು, ಗ್ರಾಮಸ್ಥರು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಧುಶ್ರೀ, ಉಪಾಧ್ಯಕ್ಷ ಧನಪಾಲ್ ಗೌಡ, ಕೃಷ್ಣೇಗೌಡ, ಮೆಕಾನಿಕ್ ರಮೇಶ್, ಕಾಡನೂರು ದಿವಾಕರ್ ಗೌಡ, ಶೇಖರ್, ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಹೂಡೆನೂರು ಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.