ಪಹಣಿ ತಿದ್ದುಪಡಿ; ಹಾಸನ ಉಪವಿಭಾಗ ಪ್ರಥಮ

7
ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕರಿಗೆ ಕಾರ್ಯಾಗಾರ

ಪಹಣಿ ತಿದ್ದುಪಡಿ; ಹಾಸನ ಉಪವಿಭಾಗ ಪ್ರಥಮ

Published:
Updated:
Deccan Herald

ಹಾಸನ : ಪಹಣಿ ತಿದ್ದುಪಡಿಯಲ್ಲಿ ಹಾಸನ ಉಪವಿಭಾಗ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ಉಪವಿಭಾಗದ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರಿಗೆ ಏರ್ಪಡಿಸಿದ್ದ ಪಹಣಿ ತಿದ್ದುಪಡಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಉಪವಿಭಾಗಾಧಿಕಾರಿಯಾಗಿ ಬಂದ ನಂತರ 13 ಸಾವಿರ ಪಹಣಿಗಳನ್ನು ಆಫ್ ಲೈನ್ ಹಾಗೂ 17360 ಪಹಣಿ ಆನ್ ಲೈನ್ ಸೇರಿದಂತೆ ಒಟ್ಟು 30 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇಷ್ಟು ಪ್ರಕರಣಗಳು ವಕೀಲರ ಮೂಲಕ ಇತ್ಯರ್ಥ ಪಡಿಸಿದ್ದರೆ, ಒಂದು ಪ್ರಕರಣಕ್ಕೆ ₹ 10 ಸಾವಿರದಂತೆ 30 ಸಾವಿರ ಪ್ರಕರಣಕ್ಕೆ ₹ 3 ಕೋಟಿ ವಕೀಲರ ವ್ಯಾಜ್ಯದ ವೆಚ್ಚವನ್ನು ಕಂದಾಯ ಇಲಾಖೆ ಉಳಿಸಿದೆ’ ಎಂದು ನುಡಿದರು.

2013ರಲ್ಲಿ ಪಹಣಿಗೆ ಸಂಬಂಧಿಸಿದಂತೆ 90 ಸಾವಿರ ಪ್ರಕರಣ ಬಾಕಿ ಉಳಿದಿದ್ದವು, ಪ್ರಸ್ತುತ ಕೇವಲ 9 ಸಾವಿರ ಪ್ರಕರಣ ಮಾತ್ರ ಉಳಿದಿದೆ. ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ಮೇಲಧಿಕಾರಿಗಳ ಮಾರ್ಗದರ್ಶನ ಪಡೆದು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.

ತಹಶೀಲ್ದಾರ್ ಶಿವಶಂಕರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ನಿರಂತರವಾಗಿ ಕಂದಾಯ ಅದಾಲತ್ ನಡೆಸಿದ್ದರೂ ಸಂಪೂರ್ಣವಾಗಿ ಪಹಣಿ ದೋಷ ಸರಿಪಡಿಸಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ 2019ರ ಜ. 31ರ ವರೆಗೂ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ್ದು, ಅಷ್ಟರೊಳಗೆ ಎಲ್ಲಾ ಪಹಣಿಗಳನ್ನು ದೋಷಮುಕ್ತವಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಹೆಚ್ಚಿನ ಪ್ರಕರಣಗಳು ಕ್ಲಿಷ್ಟಕರ ಆಗಿರುವುದರಿಂದ ತಿದ್ದುಪಡಿಗೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಇದರ ಬಗ್ಗೆ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರಿಗೂ ಗೊಂದಲವಿದೆ. ಇದನ್ನು ನಿವಾರಣೆ ಮಾಡುವ ಸಲುವಾಗಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ವಿವರಿಸಿದರು.

ನಾಗರಾಜ್ ಅವರು ಕಂದಾಯ ದಾಖಲೆಗಳ ಶುದ್ಧೀಕರಣ, ದೋಷಮುಕ್ತ ಪಹಣಿ ವಿತರಣೆ, ಕಂದಾಯ ದಾಖಲೆಗಳ ಗಣಕೀರಕಣ, ಅಂಗೈಯಲ್ಲಿ ಕಂದಾಯ ಆಡಳಿತ, ಕನಿಷ್ಟ ಸರ್ಕಾರ-ಗರಿಷ್ಟ ಆಡಳಿತ, ವಿವಾದ ಮುಕ್ತ ಮಾಲೀಕತ್ವ ಹಾಗೂ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !