ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ-ಕೆರೆ ನಿರ್ವಹಣೆ ಸಂಘ ಸಂಸ್ಥೆಗೆ: ಶಾಸಕ ಪ್ರೀತಂ ಜೆ.ಗೌಡ

Last Updated 7 ಜುಲೈ 2021, 14:04 IST
ಅಕ್ಷರ ಗಾತ್ರ

ಹಾಸನ: ನಗರ ಸೇರಿದಂತೆ ಸುತ್ತಮುತ್ತಲಿನ 6 ಕೆರೆ ಹಾಗೂ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ, ಅವುಗಳ ನಿರ್ವಹಣೆಯನ್ನು ಸಂಘ ಸಂಸ್ಥೆಗಳಿಗೆ ವಹಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ನಗರದ ರೆಡ್ ಕ್ರಾಸ್ ಭವನದ ಆವರಣದಲ್ಲಿ ಬುಧವಾರ ರೆಡ್ ಕ್ರಾಸ್ ಉದ್ಯಾನ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯಾನಗಳು ಹಾಗೂ ಕೆರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹144 ಕೋಟಿ ಅನುದಾನ ನೀಡಿದೆ. ಅಭಿವೃದ್ಧಿ ಪಡಿಸಿದ ಬಳಿಕ ಅವುಗಳ ಸಂಪೂರ್ಣ ನಿರ್ವಹಣೆಯನ್ನು ರೆಡ್ ಕ್ರಾಸ್ ಸಂಸ್ಥೆ, ಹಸಿರು ಭೂಮಿ ಪ್ರತಿಷ್ಠಾನ, ರೋಟರಿ ಕ್ಲಬ್ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಗೆ ದತ್ತು ನೀಡಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿತ್ತು. ಹಸಿರು ಭೂಮಿ ಪ್ರತಿಷ್ಠಾನದ ನಿರಂತರ ಪರಿಶ್ರಮ, ಜನಜಾಗೃತಿಯ ಪರಿಣಾಮ ಕೆರೆಗಳ ಹೂಳು ತೆಗೆಯುವ ಕಾರ್ಯ ಮಾಡಲಾಯಿತು. ಇಂದು ನಗರ ಸುತ್ತಮುತ್ತಲ ಕೆರೆಗಳಲ್ಲಿ ನೀರು ತುಂಬಿ, ಅಂತರ್ಜಲ ಮಟ್ಟವೂ ಏರಿಕೆಯಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ತುರ್ತು ಸಂದರ್ಭ ಬಂದಾಗ ಪರಿಸರದ ಬಗ್ಗೆ ಕಾಳಜಿ ತೋರ್ಪಡಿಸದೇ ಸುತ್ತ ಮುತ್ತಲ ಪ್ರದೇಶದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಬೇಕು. ಪರಿಸರ ಮಹತ್ವ ಏನು? ರೋಗ ನಿರೋಧಕ ಶಕ್ತಿ ಏಕೆ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಕೋವಿಡ್‌ ಕಾಯಿಲೆ ತೋರಿಸಿಕೊಟ್ಟಿದೆ. ಆರೋಗ್ಯ ವೃದ್ಧಿಗಾಗಿ ವಾಯು ವಿಹಾರಕ್ಕೆ ಅನುಕೂಲವಾಗುವಂತೆ ಎಲ್ಲಾ ಉದ್ಯಾನ ಅಭಿವೃದ್ದಿ ಪಡಿಸಬೇಕು ಎಂದರು.

ಸಿ.ಎಸ್.ಆರ್ ನಿಧಿ ಯೋಜನೆಯಡಿ ಹಣ ನೀಡಲು ಅವಕಾಶವಿದ್ದು, ಯೋಜನೆ ರೂಪಿಸುವಂತೆ ರೆಡ್‍ಕ್ರಾಸ್ ಸಂಸ್ಥೆ ಅಧ್ಯಕ್ಷರಿಗೆ ಡಿ.ಸಿ ತಿಳಿಸಿದರು. 3 ನೇ ಅಲೆ ಬಂದಂತಹ ವೇಳೆಯಲ್ಲಿ ಇದೇ ರೀತಿಯ ಸಹಕಾರ ನೀಡಬೇಕು ಎಂದು ಹೇಳಿದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ನಾಗಣ್ಣ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸಲಾಗುವುದು ಎಂದು ತಿಳಿಸಿದರು.

ಅಂಬೇಡ್ಕರ್‌ ನಗರದ ಅಂಗವಿಕಲ ಗೌಸ್‌ವೀರ್‌ ಅವರಿಗೆ ಸಂಸ್ಥೆ ವತಿಯಿಂದ ವ್ಹೀಲ್‌ ಚೇರ್‌ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಆರ್‌.ಮೋಹನ್, ಸ್ವಾತಂತ್ಯ್ರ ಹೋರಾಟಗಾರ ಎಚ್.ಎಂ.ಶಿವಣ್ಣ, ಎಸ್‌.ಡಿ.ಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್, ರೆಡ್‍ಕ್ರಾಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಮೋಹನ್, ಸದಸ್ಯರಾದ ವೀರಭದ್ರಪ್ಪ, ಬಿ.ಆರ್.ಉದಯ್ ಕುಮಾರ್, ಕೆ.ಟಿ.ಜಯಶ್ರಿ, ಕಾರ್ಯದರ್ಶಿ ಅನುಗನಾಳು ಕೃಷ್ಣ ಮೂರ್ತಿ, ಖಜಾಂಚಿ ಜಯೇಂದ್ರ ಕುಮಾರ್, ಅಮ್ಜಾದ್ ಖಾನ್, ಮಹಾವೀರ ಬನ್ಸಾಲಿ, ಡಾ.ಎ.ಸಾವಿತ್ರಿ, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಆರ್.ಟಿ.ದ್ಯಾವೇಗೌಡ, ಸುಬ್ಬಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT