ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರಿ ಧೋರಣೆ ಒಪ್ಪದ ಜಿಲ್ಲೆಯ ಜನತೆ: ಶಾಸಕ ಪ್ರಿತಂ ಗೌಡ

ಸಾಲಗಾಮೆ ಹೋಬಳಿಯ ಐದು ಗ್ರಾ.ಪಂ ಬಿಜೆಪಿ ತೆಕ್ಕೆಗೆ ಶಾಸಕ ಪ್ರೀತಂ
Last Updated 1 ಫೆಬ್ರುವರಿ 2021, 16:34 IST
ಅಕ್ಷರ ಗಾತ್ರ

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಸಾಲಗಾಮೆ ಹೋಬಳಿಯ ಐದು ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಶಾಸಕ ಪ್ರಿತಂ ಜೆ.ಗೌಡಹೇಳಿದರು.

ಪ್ರೀತಂ ಜೆ.ಗೌಡ ಆಕಸ್ಮಿಕ ಕೂಸು, ಅದೃಷ್ಟದಿಂದ ಶಾಸಕನಾದ ಎಂದವರಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರನೀಡಿದ್ದಾರೆ. ಉಗನೆ, ಬೈಲಹಳ್ಳಿ, ಸಾಲಗಾಮೆ, ಸೀಗೆ, ಯಲಗುಂದ ಪಂಚಾಯಿತಿ ವರಿಷ್ಠರ ಸ್ಥಾನಕ್ಕೆ ಜೆಡಿಎಸ್‌ ಸ್ಪರ್ಧಿಸಲಿಲ್ಲ.ಜಿಲ್ಲೆಯ ಜನರು ಸರ್ವಾಧಿಕಾರಿ ಧೋರಣೆ ಒಪ್ಪುವುದಿಲ್ಲ. ಜನರ ಅಪೇಕ್ಷೆಗೆ ಅನುಗುಣವಾಗಿ ಕೆಲಸ ಮಾಡಿದರೆ ಮಾತ್ರ ಜನರು ಉಳಿಸಿಕೊಳ್ಳುತ್ತಾರೆ. ಸರ್ವಾಧಿಕಾರಿಯಂತೆ ನಡೆದುಕೊಂಡರೆ ಮನೆಗೆ ಕಳಿಸುತ್ತಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆ ಬೇಲಿ ಕಿತ್ತುಹಾಕಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿಂದೆ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಸಾಲಗಾಮೆ ಒಂದು ಸುತ್ತು ಜೆಡಿಎಸ್‌ ಮುಂದೆ ಇತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚು ಗೆದ್ದಿದ್ದಾರೆ. ಆದ್ದರಿಂದ ಐದು ಪಂಚಾಯಿತಿಗಳಲ್ಲೂ ಅವಿರೋಧ ಆಯ್ಕೆಯಾಗಿದೆ ಎಂದರು.

ಹಾಸನದಲ್ಲಿ 25 ವರ್ಷಗಳಿಂದ ದೇವೇಗೌಡರು ಸಂಸದರಾಗಿದ್ದಾರೆ. ಈಗ ಅವರ ಮೊಮ್ಮಗ ಪ್ರಜ್ವಲ್‌ ಸಂಸದರಾಗಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇಷ್ಟು ವರ್ಷ ಬೇಕಾಯಿತಾ?. ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಹಾಸನಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕಾದರೆ ಸಂಸದರ ಜೊತೆಗೆ ಪ್ರಧಾನಿ ಭೇಟಿ ಮಾಡಲು ಹೋಗುತ್ತೇನೆ. ಒಂದು ವೇಳೆ ಸಂಸದರ ಅವಧಿಯಲ್ಲಿ ವಿಮಾನ ನಿಲ್ದಾಣ ಆಗದಿದ್ದರೆ, ಅದರಲ್ಲಿ ವಿಫಲನಾದೆ ಎಂದು ಒಪ್ಪಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಮಾನ ನಿಲ್ದಾಣದ ಅಜೆಂಡಾ ಮುಂದಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸುವರು ಎಂದರು.

ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಸಲಹೆಯಂತೆ ಚನ್ನಪಟ್ಟಣ ಕೆರೆ ಮೂಲ ಯೋಜನೆಗೆ ಸಹಕಾರ ನೀಡಲಾಗುವುದು. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ನೀಡಿದ್ದ ₹144 ಕೋಟಿ ಅನುದಾನವನ್ನು ವಿವಿಧ ಕೆರೆಗಳ ಅಭಿವೃದ್ಧಿಗೆ ಹಂಚಿಕೆ ಮಾಡಲಾಗಿದೆ. ಯಾವುದಾದರೂ ಕೆಲಸ ಮಾಡಿದರೆ ಜೆಡಿಎಸ್‌ ನಾಯಕರು ಅಡ್ಡಿ ಪಡಿಸುತ್ತಾರೆ. ಮಾಡದಿದ್ದರೆ ವಿರೋಧಿಸುತ್ತಾರೆ. ಅವರು ಮಾಡಿದರೆ ಮಾತ್ರ ಅಭಿವೃದ್ಧಿ ಅಂದುಕೊಂಡಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ್‌ ಮೂರ್ತಿ ಹಾಗೂ ಐದು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT