ಬುಧವಾರ, ಜನವರಿ 20, 2021
22 °C
ಯೋಜನೆಯಲ್ಲಿ ಲೋಪವಿದ್ದರೆ ಸರಿಪಡಿಸಿ: ಶಾಸಕ ಎಚ್‌.ಡಿ.ರೇವಣ್ಣ

ಚನ್ನಪಟ್ಟಣ ಕೆರೆ ಅಂಗಳ ಅಭಿವೃದ್ಧಿಗೆ ಅನುಮತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ಹೃದಯಭಾಗದಲ್ಲಿರುವ ಚನ್ನಪಟ್ಟಣ ಕೆರೆ ಅಂಗಳದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿಹಾರಧಾಮ ಅಭಿವೃದ್ಧಿ ಮತ್ತು ಉದ್ಯಾನ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಸಿದರು.

ಹಾಸನ ಜಿಲ್ಲೆಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹144 ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಬಜೆಟ್‌ನಲ್ಲಿ ₹36 ಕೋಟಿ ಅನುದಾನ ಮೀಸಲಿರಿಸಲಾಗಿತ್ತು. ಆದರೆ, ಸ್ಥಳೀಯ ಶಾಸಕ ಪ್ರೀತಂ ಗೌಡ ಪತ್ರ ಬರೆದಕಾರಣ ಸರ್ಕಾರ ಯೋಜನೆಗೆ ತಡೆ ನೀಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹತ್ತು ವರ್ಷಗಳಿಂದ ಕೆರೆ ಪಾಳು ಬಿದ್ದಿದೆ. ಜೈಪುರದ ಸಿನ್ಸಿಯರ್‌ ಅರ್ಕಿಟೆಕ್ಟ್ಸ್‌ ಎಂಜಿನಿಯರ್‌ ಪ್ರವೈಟ್‌ ಲಿಮೆಟೆಡ್‌ ಸಂಸ್ಥೆಯು ₹88.50 ಲಕ್ಷ ವೆಚ್ಚದಲ್ಲಿ ನೀಲ ನಕ್ಷೆ ತಯಾರಿಸಿದೆ. 53 ಎಕರೆ ಪ್ರದೇಶದಲ್ಲಿ ಆಧುನಿಕ ಮಾದರಿಯ ವಿಹಾರಧಾಮ, ಸುತ್ತಲಿನ ರಸ್ತೆಗಳ ಅಭಿವೃದ್ಧಿ, ಸೇತುವೆ, ಉದ್ಯಾನ, ಕಾರಂಜಿ ನಿರ್ಮಾಣ, ದೋಣಿ ವಿಹಾರ, ಮಕ್ಕಳ ರೈಲು ಅಳವಡಿಕೆ, ವಾಟರ್‌ ಪಾರ್ಕ್‌ ಸೇರಿದಂತೆ ಹಲವು ಕಾಮಗಾರಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಜಾಗವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ವಿವರಿಸಿದರು.

ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಹಾಸನ ನಗರಸಭೆ ಸದಸ್ಯರು ಹಾಗೂ ಸಂಘ ಸಂಸ್ಥೆಗಳು ಪತ್ರ ಬರೆದು ಯೋಜನೆ ಮುಂದುವರೆಸುವಂತೆ ಮನವಿ ಮಾಡಿವೆ. ಯೋಜನೆಯಲ್ಲಿ ಲೋಪವಿದ್ದರೆ ಸರಿಪಡಿಸಿ, ತಮಗೆ ಬೇಕಾದವರಿಗೆ ಗುತ್ತಿಗೆ ನೀಡಲಿ. ನಗರದ ಇತರೆ ಕೆರೆ ಹಾಗೂ ಉದ್ಯಾನಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರಲಿ. ಆದರೆ, ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮೀಸಲಿರಿಸಿದ್ದ ಅನುದಾನ ಬಳಸುವುದು ಸರಿಯಲ್ಲ. ದ್ವೇಷದ ರಾಜಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಪ್ರಮುಖ ಯೋಜನೆಗಳನ್ನು ತಡೆ ಹಿಡಿದರೆ ಹೋರಾಟ ಮಾಡಲಾಗುವುದು. ಮೂಲ ಯೋಜನೆಯನ್ನು ಅನುಷ್ಠಾನ ಮಾಡಬೇಕು. ಕಾಮಗಾರಿಗಳನ್ನು ತಡೆ ಹಿಡಿಯುವುದಾದರೆ ನಿತ್ಯ ಅರ್ಜಿ ಬರೆಯಬಹುದಿತ್ತು. ಹಣ ಮಾಡುವ ದುರುದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಬಿಜೆಪಿ ಶಾಸಕರಿಗೆ ಪ್ರಾಕ್ಟಿಕಲ್ ಅನುಭವವಿಲ್ಲ. ಜಿಲ್ಲೆಯಲ್ಲಿ ಏನೇನು‌ ನಡೆಯುತ್ತಿದೆ ಎಂಬುದು ಗೊತ್ತಿದೆ. 2023 ಕ್ಕೆ ಜೆಡಿಎಸ್ ಅಧಿಕಾರಕ್ಕೆ ತರದಿದ್ದರೆ ರಾಜಕೀಯದಲ್ಲಿ ಇರುವುದಿಲ್ಲ ಎಂದರು.

ದೇವೇಗೌಡರಿಗೆ ರಾಜಕೀಯ ಶಕ್ತಿ ನೀಡಿದ ಜಿಲ್ಲೆಯ ಜನರ ಋಣ ಇದೆ. ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅಧಿಕಾರಿಗಳು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು