ಶನಿವಾರ, ಆಗಸ್ಟ್ 13, 2022
22 °C
ಸಾಹಿತಿ, ನಾಟಕಕಾರ ಬೇಲೂರು ಕೃಷ್ಣಮೂರ್ತಿ ಮೃತದೇಹ ಆಸ್ಪತ್ರೆಗೆ ದಾನ

ಶತ ನಾಟಕ ಸಾರ್ವಭೌಮ ಬೇಲೂರು ಕೃಷ್ಣಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರು: ಸಾಹಿತಿ, ನಾಟಕಕಾರ ಬೇಲೂರು ಕೃಷ್ಣಮೂರ್ತಿ ಅವರಿಗೆ ಆಗಸ್ಟ್ 8ಕ್ಕೆ 89 ವರ್ಷ ಪೂರ್ಣಗೊಂಡಿದ್ದರಿಂದ  ಜನ್ಮದಿನದ ಸಂಭ್ರಮಾಚರಣೆಗೆ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು. ದುರದೃಷ್ಟವಶಾತ್ ಅಭಿಮಾನಿ ಬಳಗ ತಂದಿದ್ದ ಬೆಳ್ಳಿ ಕಿರೀಟವನ್ನು ಮೃತರಿಗೆ ತೊಡಿಸುವ ಸನ್ನಿವೇಶ ಎದುರಾಯಿತು.

ಮಂಗಳವಾರ ನಿಧನರಾದ ಸಾಹಿತಿ, ನಾಟಕಕಾರ ಬೇಲೂರು ಕೃಷ್ಣಮೂರ್ತಿ (89) ಅವರಿಗೆ ಜಿಲ್ಲೆಯ ಸಾಹಿತ್ಯಾಸಕ್ತರು, ನಾಟಕಪ್ರೇಮಿಗಳು ಹಾಗೂ ಶಿಷ್ಯವೃಂದ ಕಂಬನಿ ಮಿಡಿಯಿತು.

ಶಾಸಕ ಕೆ.ಎಸ್. ಲಿಂಗೇಶ್ ಹಾಗೂ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರಮುಖರು ಸೇರಿದಂತೆ ಅಭಿಮಾನಿಗಳು ಹಾಗೂ ಶಿಷ್ಯವೃಂದ ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ  ಪಡೆದರು. ಕಸಾಪ ಜಿಲ್ಲಾ ಕಚೇರಿಯಲ್ಲಿ ಅಧ್ಯಕ್ಷ ಪ್ರೊ. ಜಯಣ್ಣಗೌಡ ಹಾಗೂ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ಗೌರವಿಸಿದರು.

ಮೃತದೇಹವನ್ನು ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಆಯುರ್ವೇದ ಆಸ್ಪತ್ರೆಗೆ ದಾನ ಮಾಡಲಾಯಿತು.

1931ರ ಆಗಸ್ಟ್ 8 ರಂದು ಅರಸೀಕೆರೆ ತಾಲ್ಲೂಕು ಮಾದನಹಳ್ಳಿಯಲ್ಲಿ  ಬೇಲೂರು ಕೃಷ್ಣಮೂರ್ತಿ ಜನಿಸಿದರು. ತಂದೆ ಅನಂತರಾಮಯ್ಯ ತಾಯಿ ಲಕ್ಷ್ಮೀದೇವಮ್ಮ.

ಎಂ.ಕೃಷ್ಣಮೂರ್ತಿರಾವ್ ಸಾಹಿತ್ಯ ಕ್ಷೇತ್ರದಲ್ಲಿ ಬೇಲೂರು ಕೃಷ್ಣಮೂರ್ತಿ ಆಗಿ ಗುರುತಿಸಿಕೊಂಡರು. ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇರ್ಪಡೆಗೊಂಡು ನಿವೃತ್ತಿಯಾದರು. ನೂರಕ್ಕೂ ಅಧಿಕ ಕನ್ನಡ ಸಾಮಾಜಿಕ ನಾಟಕಗಳ ರಚಿಸಿ, ಸ್ವತಃ ಅಭಿನಯ ಮಾಡಿದ್ದಲ್ಲದೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ  ಕೃಷ್ಣಮೂರ್ತಿಯವರು ಶತನಾಟಕ ಸಾರ್ವಭೌಮ ಎಂದೆ ಖ್ಯಾತಿ ಪಡೆದಿದ್ದಾರೆ.

ಆಕಾಶವಾಣಿಯಲ್ಲಿ ಇವರ ‘ಲಚ್ಚಿ’, ‘ತ್ಯಾಗಿ’, ‘ಅಸಲಿ ನಕಲಿ’, ‘ಬೇಸ್ತು ಬಿದ್ದ ಭಾವ’ ನಾಟಕಗಳು ಪ್ರಸಾರಗೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.