ಹಾಸನ: ಕಳೆದ ಎರಡು ವಾರದಲ್ಲಿಜಿಲ್ಲೆಯ ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚು ಕಂಡು ಬಂದಿರುವ ಸ್ಥಳಗಳಲ್ಲಿ ಸಂಪೂರ್ಣ ಲಸಿಕೆ ನೀಡಲು ಕ್ರಮವಹಿಸುವಂತೆ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಎರಡು ಡೋಸ್ ಲಸಿಕೆ ಪಡೆಯಲು ಬಾಕಿ ಇರುವ 1.14 ಲಕ್ಷ ಜನರಿಗೆ 10 ದಿನದೊಳಗೆ ಪೂರ್ಣಗೊಳಿಸಬೇಕು.ಹೋಮ್ ಐಸೋಲೇಶನ್‍ನಲ್ಲಿ ಇರುವವರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ಮನೆಗಳು ಐಸೋಲೇಷನ್‍ಗೆ ಸೂಕ್ತವಿಲ್ಲದೇ ಇರುವುದು ಕಂಡು ಬಂದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅದೇಶಿಸಿದರು.
ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಿಗ ವರ್ಗಾವಣೆ ಮಾಡಬೇಕು.ಆರೋಗ್ಯ ಸಿಬ್ಬಂದಿ ಲಸಿಕೆ ಹಾಕಲು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಲಭ್ಯವಾಗದ ಜನರ ಮನೆಗೆ ಮುಂಜಾನೆಯೇ ತೆರಳಿ ಲಸಿಕೆ ನೀಡಬೇಕು. ಅರಕಲಗೂಡು ಆಮ್ಲಜನಕ ಘಟಕಕ್ಕೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.
ರೈತರ ಆತ್ಮಹತ್ಯೆ ಪರಿಹಾರ ಧನದ ಚೆಕ್ ಅನ್ನು ಸೆ.13ರೊಳಗೆ ಅರ್ಹ ಫಲಾನುಭವಿಗಳಿಗೆ ಕಡ್ಡಾಯವಾಗಿ ವಿತರಿಸಬೇಕು. ಮುಂಗಾರು ಹಂಗಾಮಿನ ರಸಗೊಬ್ಬರ ದಾಸ್ತಾನಿನ ವಿವರ ಪಡೆದು ಕೊರತೆ ಇರುವ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರ ಪೂರೈಸಬೇಕು. ಕೃಷಿಕರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಫ್ರೂಟ್ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ, ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ 9 ಸಾವಿರ ಗರ್ಭಿಣಿಯರಿದ್ದು, ಅವರಿಗೆ ವಾರದೊಳಗೆ ಶೇಕಡಾ 100 ರಷ್ಟು ಲಸಿಕೆ ನೀಡುವಂತೆ
ಈಗಾಗಲೇ ತಿಳಿಸಲಾಗಿದೆ. ನಿಗದಿತ ಲಸಿಕಾ ಗುರಿ ತಲುಪದಂತಹ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ನೊಟೀಸ್ ಜಾರಿಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಉಪವಿಭಾಗಾಧಿಕಾರಿಗಳಾದ ಬಿ.ಎ.ಜಗದೀಶ್, ಪ್ರತೀಕ್ ಬಾಯಲ್, ಹಿಮ್ಸ್ ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್, ಕೃಷಿ ಇಲಾಖೆ ಜಂಟಿ
ನಿರ್ದೇಶಕ ಕೆ.ಎಚ್. ರವಿ, ಆರ್.ಸಿ. ಎಚ್ ಅಧಿಕಾರಿ ಡಾ. ಕಾಂತ್‍ರಾಜ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.