ಕೊಣನೂರು: ಕೊಣನೂರು ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ‘ಪೇಪರ್ ಅಣ್ಣಯ್ಯ’ ಎಂದೇ ಹೆಸರಾಗಿರುವ ಎನ್.ಅಣ್ಣಯ್ಯನವರ ಪತ್ರಿಕಾ ಸೇವೆ ಎಲ್ಲರ ಮನಸ್ಸಿನಲ್ಲಿ 5 ದಶಕಗಳಿಂದಲೂ ಅಚ್ಚೊತ್ತಿದೆ.
ಕೊಣನೂರಿನ ನಿವಾಸಿ ಎನ್. ಅಣ್ಣಯ್ಯನವರು 1970ರಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಪತ್ರಿಕಾ ವಿತರಕರಾಗಿ ಸೇವೆ ಪ್ರಾರಂಭಿಸಿದ್ದು, 55 ವರ್ಷಗಳಿಂದ ನಿರಂತರವಾಗಿ ಮನೆ ಮತ್ತು ಹಳ್ಳಿಗಳಿಗೆ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ತಮ್ಮ 78ನೇ ವರ್ಷದಲ್ಲೂ ಮುಂದುವರಿಸಿದ್ದಾರೆ.
‘ಪ್ರಜಾವಾಣಿ’ಯ ಪ್ರಸರಣ ವಿಭಾಗದ ಮುಖ್ಯಸ್ಥರಾಗಿದ್ದ ಐ.ಕೆ. ಠಾಕೂರ್ ಅವರ ಅವಧಿಯಲ್ಲಿ ₹280 ಮುಂಗಡ ನೀಡಿ ವಿತರಕನಾಗಿ ಕೆಲಸ ಪ್ರಾರಂಭಿಸಿದೆ. ಮೊದಲಿಗೆ 45 ಪ್ರತಿಗಳನ್ನು ತರಿಸಲು ಪ್ರಾರಂಭಿಸಿದೆ’ ಎಂದು ಅಣ್ಣಯ್ಯ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.
‘ಪ್ರತಿ ತಿಂಗಳಿಗೆ ಒಂದು ‘ಪ್ರಜಾವಾಣಿ’ ಪತ್ರಿಕೆಗೆ ₹4.20 ಬೆಲೆ ಇತ್ತು. ನಂತರದ ದಿನಗಳಲ್ಲಿ ಬೆಲೆ ಏರಿಕೆಯಾಗುತ್ತ ಬಂತು. ಇಂದಿಗೂ ಸಹ 85 ‘ಪ್ರಜಾವಾಣಿ’, 13 ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳನ್ನು ತರಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿದರು.
ಕೊಣನೂರು ಸೇರಿದಂತೆ ಸುತ್ತಲಿನ ಹಂಡ್ರಂಗಿ, ಕಬ್ಬಳಿಗೆರೆ, ಕಟ್ಟೇಪುರ, ಬನ್ನೂರು, ಬೆಟ್ಟದಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಗೂ ‘ಪ್ರಜಾವಾಣಿ’ ಪತ್ರಿಕೆಯನ್ನು ತಲುಪಿಸುತ್ತಿರುವ ಗೌರವ ಎನ್.ಅಣ್ಣಯ್ಯನವರಿಗೆ ಸಲ್ಲುತ್ತದೆ.
‘ಸಿಗುವ ಕಡಿಮೆ ಆದಾಯದಲ್ಲಿ ಇದೊಂದು ಸೇವೆ ಎಂದು ಪರಿಗಣಿಸಿ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದು, ಇಳಿ ವಯಸ್ಸಿನಲ್ಲಿಯೂ ಪತ್ರಿಕಾ ಕಾಯಕ ಮುಂದುವರಿಸುತ್ತಿದ್ದೇನೆ. 3 ರಿಂದ 4 ಹುಡುಗರಿಗೆ ಅಲ್ಪ ಪ್ರಮಾಣದ ಸಂಬಳ ನೀಡುತ್ತ, ಅವರ ಶಿಕ್ಷಣಕ್ಕೆ ಸಹಕಾರ ನೀಡುತ್ತ ನನ್ನ 5 ದಶಕಗಳ ಕಾಯಕವನ್ನು ಸಂತಸದಿಂದ ಮುನ್ನಡೆಸುತ್ತಿದ್ದೇನೆ’ ಎನ್ನುತ್ತಾರೆ ಅಣ್ಣಯ್ಯನವರು.
‘1973ರಿಂದಲೂ ನಾನು ವಿತರಕ’
ಸಕಲೇಶಪುರ: ‘ನಾನು ‘ಪ್ರಜಾವಾಣಿ’ ಪತ್ರಿಕೆಯ ವಿತರಕನಾಗಿ 1973ರಿಂದ ಸಕಲೇಶಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹಿಂದಿಗಿಂತಲೂ ಈಗ ‘ಪ್ರಜಾವಾಣಿ’ ಸಾಕಷ್ಟು ಅಭಿವೃದ್ಧಿಯಾಗಿದೆ’ ಎಂದು ಹಸನುಲ್ಲಾ ಷರೀಫ್ ಹೆಮ್ಮೆಯಿಂದ ಹೇಳುತ್ತಾರೆ.
‘ಹಿಂದೆ ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ಇರಲಿಲ್ಲ. ಈಗ ಸ್ಥಳೀಯ ಸುದ್ದಿಗಳು ಹೆಚ್ಚು ಪ್ರಕಟವಾಗುವುದರಿಂದ ಓದುಗರು ಹೆಚ್ಚಾಗಿದ್ದಾರೆ ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಎಲ್ಲ ಓದುಗರಿಗೆ ಪತ್ರಿಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ’ ಎನ್ನುವ ನೋವು ಅವರದ್ದು.
‘ಮಲೆನಾಡಿನ ಈ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವುದು ಒಂದು ಕಡೆಯಾದರೆ, ಬಡಾವಣೆಗಳು, ಗುಡ್ಡಗಾಡು ಪ್ರದೇಶದಲ್ಲಿ ಇರುವುದರಿಂದ ಸೈಕಲ್‌ನಲ್ಲಿ ಹೋಗಿ ಪತ್ರಿಕೆ ಹಂಚುವುದಕ್ಕೆ ಸಾಧ್ಯವಿಲ್ಲ. ಇದರಿಂದ ಪತ್ರಿಕೆ ಹಂಚಲು ಹುಡುಗರು ಬರುವುದಿಲ್ಲ. ಬಂದರೂ ಸರಿಯಾಗಿ ಒಂದು ತಿಂಗಳು ಸಹ ಪತ್ರಿಕೆ ಹಂಚುವುದಿಲ್ಲ. ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್‌ಗಳ ಸಂಚಾರ ವ್ಯವಸ್ಥೆ ಸರಿ ಇಲ್ಲದ್ದರಿಂದ ಹೋಬಳಿ ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಸ್‌ನಲ್ಲಿ ಪತ್ರಿಕೆ ಕಳಿಸುವುದು ಸಹ ಸಮಸ್ಯೆ ಇದೆ’ ಎಂದು ವಿವರಿಸಿದರು.
‘₹7 ಬೆಲೆಯಿಂದ ಕೌಂಟರ್ ಸೇಲ್ ಕಡಿಮೆಯಾಗಿದೆ. ಬೇರೆ ಪತ್ರಿಕೆಗಳು ₹5ಕ್ಕೆ ಮಾರಾಟ ಮಾಡುತ್ತಿವೆ. ಓದುಗರು ‘ಪ್ರಜಾವಾಣಿ’ ಪತ್ರಿಕೆ ಓದುವುದಕ್ಕೆ ಹೆಚ್ಚು ಇಷ್ಟ ಪಡುತ್ತಾರೆ. ಆದರೆ ಕೌಂಟರ್ ಸೇಲ್ಸ್‌ನಲ್ಲಿ ₹7 ಚಿಲ್ಲರೆ ಇಲ್ಲದ ಕಾರಣ ₹5 ರೂಪಾಯಿ ಕೊಟ್ಟು ಬೇರೆ ಪತ್ರಿಕೆಗಳನ್ನು ಕೊಂಡುಕೊಳ್ಳುತ್ತಾರೆ. ₹10 ಪಡೆದು ₹3 ಚಿಲ್ಲರೆ ಕೊಡುವುದಕ್ಕೆ ಸ್ಟಾಲ್‌ನವರು ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ‘ಪ್ರಜಾವಾಣಿ’ ಕೌಂಟರ್ ಸೇಲ್ ತುಂಬಾ ಕಡಿಮೆ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
46 ವರ್ಷಗಳಿಂದ ‘ಪ್ರಜಾವಾಣಿ’ ಪತ್ರಿಕೆಯನ್ನು ಮಾರಾಟ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ಸಂತೋಷವಿದೆ. ಪತ್ರಿಕೆಯ ವಿತರಣೆಯ ಮೂಲಕವೇ ಜೀವನ ನಿರ್ವಹಣೆ ಮಾಡಿದ್ದೇನೆ. ಜೆ.ವಿ. ಶ್ರೀನಿವಾಸಮೂರ್ತಿ ಜೆ.ಸಿ.ಪುರ 32 ವರ್ಷದಿಂದ ವಿತರಕನಾಗಿದ್ದೇನೆ. ಈಗ ಹಿರಿಯರು ಮಾತ್ರ ಪತ್ರಿಕೆ ಓದುತ್ತಿದ್ದಾರೆ. ಪತ್ರಿಕೆ ಅತ್ಯುತ್ತಮ ಮಾಧ್ಯಮ. ಯುವಕರೂ ಪತ್ರಿಕೆ ಓದಬೇಕು. ಪತ್ರಿಕಾ ವಿತರಕರನ್ನು ನೋಡುವ ಜನರ ದೃಷ್ಟಿಕೋನ ಬದಲಾಗಬೇಕು. ಯೋಗೇಶ್ ಹಾಸನ 35 ವರ್ಷಗಳಿಂದ ‘ಪ್ರಜಾವಾಣಿ’ ಪತ್ರಿಕೆ ವಿತರಣೆ ಮಾಡುತ್ತಿದ್ದೇನೆ. ಮೊದಲು ತಂದೆ ಮಾಡುತ್ತಿದ್ದರು. ಈಗ ನಾನು ಮಾಡುತ್ತಿದ್ದೇನೆ. ಕೆಲ ವಿಷಯಗಳನ್ನು ಹೊರತುಪಡಿಸಿದರೆ ವಿತರಕ ವೃತ್ತಿಯಲ್ಲಿ ಸಂತಸವಿದೆ. ದಿನೇಶ್ ಬಾಬು ಶ್ರವಣಬೆಳಗೊಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.