ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯ ಬಂದಾಗ ಪ್ರಜ್ವಲ್‌ ರೇವಣ್ಣ ವಿಡಿಯೊ ಬಿಡುಗಡೆ: ಬಿಜೆಪಿ ಮುಖಂಡ ದೇವರಾಜೇಗೌಡ

Published 11 ಜನವರಿ 2024, 14:35 IST
Last Updated 11 ಜನವರಿ 2024, 14:35 IST
ಅಕ್ಷರ ಗಾತ್ರ

ಹಾಸನ: ‘ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆ ಕೆಲ ವಿಡಿಯೊ ದಾಖಲೆಗಳು ನನ್ನ ಬಳಿ ಇವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ’ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಈ ವಿಡಿಯೊ ಪ್ರದರ್ಶನ ಮಾಡದಂತೆ 2023ರ ಜುಲೈನಲ್ಲಿ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದಾರೆ’ ಎಂದರು.

‘ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಗೌರವ ಇರುವುದರಿಂದ ವಿಡಿಯೊ ಬಿಡುಗಡೆ ಮಾಡದೇ ಸುಮ್ಮನಿದ್ದೇನೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗಬೇಕಿದ್ದು, ನಂತರ ಎಲ್ಲ ವಿಡಿಯೊಗಳನ್ನು ನಗರದ ಎನ್.ಆರ್. ವೃತ್ತದಲ್ಲಿ ಪ್ರದರ್ಶನ ಮಾಡುತ್ತೇನೆ’ ಎಂದು ಸವಾಲೆಸೆದರು.

‘ಬುಧವಾರ ರೇವಣ್ಣ ಅವರ ಕುಮ್ಮಕಿನಿಂದ ನನ್ನ ವಿರುದ್ಧ ಪತ್ರಿಕಾಗೋಷ್ಠಿ ಮಾಡಲಾಗಿದೆ. ಈ ಜಮೀನು ವಿವಾದ ಸಂಬಂಧ ಹೈಕೋರ್ಟ್‌ನಲ್ಲಿ ಹಲವು ಬಾರಿ ದಾವೆ ಹೂಡಿದ್ದು, ಎಲ್ಲ ಪ್ರಕರಣದಲ್ಲೂ ನನ್ನ ಪರ ತೀರ್ಪು ಬಂದಿದೆ. ನ್ಯಾಯಯುತವಾಗಿಯೇ ಜಮೀನು ಪರಭಾರೆ ಮಾಡಲಾಗಿದ್ದು, ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಕೊಳ್ಳಲು ರೇವಣ್ಣ ಈ ರೀತಿ ಬೇರೆಯವರನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಸಂಬಂಧ ಎಲ್ಲ ದಾಖಲೆಗಳನ್ನು ಕೇಂದ್ರದ ಬಿಜೆಪಿ ನಾಯಕರಿಗೂ ಸಲ್ಲಿಸಲಾಗಿದೆ. ರೇವಣ್ಣ ಅವರಂತೆ ನಾನು ಯಾವುದೇ ಅಕ್ರಮವನ್ನು ಎಸಗಿಲ್ಲ. ಹಾಗೇನಾದರೂ ನನ್ನ ಅಕ್ರಮಗಳ ಬಗ್ಗೆ ಅವರ ಬಳಿ ಮಾಹಿತಿ ಇದ್ದರೆ ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ಪ್ರಜ್ವಲ್ ರೇವಣ್ಣ ಅವರ ಪ್ರಕರಣ, ರೇವಣ್ಣ ಕುಟುಂಬದ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದು, ಪ್ರತಿ ಚುನಾವಣೆಯಲ್ಲೂ ಸಾರ್ವಜನಿಕವಾಗಿ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

‘ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಜಮೀನು ಪರಭಾರೆ ಪ್ರಕರಣ ಸಂಬಂಧ ರಾಜಿ ಮಾಡಲು ವಕೀಲ ಪೂರ್ಣಚಂದ್ರ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್ ಸೇರಿದಂತೆ ಇತರರು ನನ್ನ ಬಳಿ ಬಂದಿದ್ದರು. ಈ ಎಲ್ಲ ವಿಚಾರಗಳ ಕುರಿತು ಸ್ಪಷ್ಟ ದಾಖಲೆ ನನ್ನ ಬಳಿಯಿದ್ದು ಸಮಯ ಬಂದಾಗ ಬಿಡುಗಡೆ ಮಾಡುವುದಾಗಿ’ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT