ಬುಧವಾರ, ನವೆಂಬರ್ 25, 2020
21 °C
ಎರಡು ದಶಕದ ಕೆಲಸ ಎರಡು ವರ್ಷದಲ್ಲಿ ಪೂರ್ಣ: ವೇಣುಗೋಪಾಲ್‌

ಹೈಕಮಾಂಡ್‌ ಸೂಚನೆಯಂತೆ ಶಿರಾದಲ್ಲಿ ಪ್ರೀತಂ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಬಿಜೆಪಿ ಮೈಸೂರು ವಿಭಾಗದ ಸಹ ಪ್ರಭಾರಿ ಆಗಿರುವ ಶಾಸಕ ಪ್ರೀತಂ ಜೆ.ಗೌಡ ಅವರು ಪಕ್ಷದ ಸೂಚನೆ ಮೇರೆಗೆ ಶಿರಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದು, ಇನ್ನು ಎರಡು, ಮೂರು ದಿನದಲ್ಲಿ ಕ್ಷೇತ್ರಕ್ಕೆ ಹಿಂತಿರುಗಲಿದ್ದಾರೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ಕೆ.ವೇಣುಗೋಪಾಲ್‌ ಸ್ಪಷ್ಟ ಪಡಿಸಿದರು.

ಹಿಂದೆ ಕೆ.ಆರ್‌.ಪೇಟೆ ಉಪಚುನಾವಣೆ ವೇಳೆ ವಿಜಯೇಂದ್ರ ಹಾಗೂ ಪ್ರೀತಂ ಜೆ.ಗೌಡ ಜೋಡಿ ಉತ್ತಮ ಫಲಿತಾಂಶ ತಂದು ಕೊಟ್ಟ ಕಾರಣ ಶಿರಾ ಕ್ಷೇತ್ರದ ಉಸ್ತುವಾರಿ ವಹಿಸಲಾಗಿದೆ. ಹೈಕಮಾಂಡ್ ನಿರ್ದೇಶನ ಪಾಲಿಸುವುದು ಅವರ ಕರ್ತವ್ಯ ಎಂದು ಗುರುವಾರ ಸುದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಷೇತ್ರ ಅಭಿವೃದ್ಧಿಗೆ ಪ್ರೀತಂ ಶಕ್ತಿ ಮೀರಿ ಶ್ರಮಿಸುತ್ತಿದ್ದು, ಅಂದಾಜು ₹ 300 ಕೋಟಿ ವೆಚ್ಚದ ವಿವಿಧ ಕಾಮಗಾರಿ
ಗ್ರಾಮೀಣ ಭಾಗದಲ್ಲಿ ಪ್ರಗತಿಯಲ್ಲಿದೆ. ಅಲ್ಲದೇ ನಗರ ಪ್ರದೇಶದ ಒಳಚರಂಡಿ ವ್ಯವಸ್ಥೆಗೆ ಸರ್ಕಾರ ₹168 ಕೋಟಿ
ಅನುದಾನಕ್ಕೆ ಅನುಮೋದನೆ ನೀಡಿದೆ. ಎರಡು ದಶಕಗಳಿಂದ ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿದ ಅನೇಕ ಕಾಮಗಾರಿಗಳು ಈ ಎರಡು ವರ್ಷದ ಅವಧಿಯಲ್ಲಿ ಪೂರ್ಣವಾಗಿವೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್ ಅವರು ಆರೋಪ ಮಾಡುವ ಬದಲು ನಗರವನ್ನು ಒಮ್ಮೆ ಸುತ್ತಾಡಿ ನೋಡಲಿ. ಉದ್ದೂರು ರಿಂಗ್ ರಸ್ತೆ, ಆರ್‌ಟಿಒ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ, ರಾಜಘಟ್ಟ ರಸ್ತೆ, ಫುಡ್‌ ಸ್ಟ್ರೀಟ್‌ ಜೊತೆಗೆ ಹಾಸನ ನಗರಕ್ಕೆ ಸಾವಿರ ಮನೆಗಳನ್ನು ಶಾಸಕರು ಮಂಜೂರು ಮಾಡಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೆ 40 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ಅಲ್ಲದೇ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಕಾಂಕ್ರಿಟ್‌ ರಸ್ತೆಯನ್ನಾಗಿ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

‘ಎರಡು ದಶಕಗಳಿಂದ ಜಾತಿ ರಾಜಕೀಯ ಮಾಡಿಕೊಂಡಿರುವ ರೇವಣ್ಣ ಅವರಿಗೆ ಬದಲಾವಣೆ ಸಹಿಸಲು ಆಗುತ್ತಿಲ್ಲ. ಮನೆಯಲ್ಲಿ ನಡೆಯುತ್ತಿದ್ದ ಡಿಸಿಸಿ ಬ್ಯಾಂಕ್ ಚುನಾವಣೆ ಈ ಬಾರಿ ಬಹಿರಂಗವಾಗಿ ನಡೆಯಿತು. ಹಾಸನದಲ್ಲಿ ಪ್ರಜಾಪ್ರಭುತ್ವ ರಕ್ಷಿಸಲು ಬಿಜೆಪಿ ಹೆಜ್ಜೆ ಇರಿಸಿದೆ’ ಎಂದರು.

ಬಿಜೆಪಿ ಮುಖಂಡ ದೇವರಾಜ್ ಮಾತನಾಡಿ, ‘ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ (ಸಿಡಿಒ) ಸುನಿಲ್‌ ಅವರು ಹಾಗೂ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್‌ ಅವರು ದಾಸ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಶಾಸಕ ಎಚ್.ಡಿ. ರೇವಣ್ಣ ಆರೋಪ ಮಾಡುತ್ತಿದ್ದಾರೆ. ಸಂಜೀವಿನಿ ಹಾಗೂ ಜನತಾ ಬಜಾರ್ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಯಾರನ್ನೂ ಮತದಾರರ ಪಟ್ಟಿಯಿಂದ ಕೈ ಬಿಟ್ಟಿಲ್ಲ’ ಎಂದರು.

ಬಿಜೆಪಿ ಮುಖಂಡರಾದ ದಯಾನಂದ್, ಪ್ರದೀಪ್, ನಾಗೇಶ್, ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು