ಬುಧವಾರ, ಡಿಸೆಂಬರ್ 8, 2021
18 °C
‘ಶಿಕ್ಷಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ

ಖಾಸಗಿ ಶಾಲೆ ಶಿಕ್ಷಕರಿಗೆ ಸೇವಾ ಭದ್ರತೆ ಅಗತ್ಯ: ಪಿ.ಜಿ.ಆರ್.ಸಿಂಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ನಿಂದಾಗಿ ಶಾಲೆಗಳನ್ನು ಬಂದ್‌ ಮಾಡಿದ ಕಾರಣ ಖಾಸಗಿ ಶಾಲೆಗಳ ಶಿಕ್ಷಕರ ಬದುಕು ದುಸ್ತರವಾಗಿದ್ದು, ಖಾಸಗಿ ಶಾಲೆ ಶಿಕ್ಷಕರಿಗೆ ಸೇವಾ ಭದ್ರತೆ ನೀಡುವ ಅಗತ್ಯವಿದೆ ಎಂದು ಸ್ಕೌಟ್ಸ್ ಮತ್ತು  ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಾಜ್ಯ ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ‘ಶಿಕ್ಷಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ಸ್ಪರ್ಧಾತ್ಮಕ ದಿನಗಳಲ್ಲಿ ನಿರಂತರವಾಗಿ ಶಿಕ್ಷಕರು ಪರಿಶ್ರಮ ಹಾಕಬೇಕು. ಕೊರೊನಾದಿಂದ ಶಾಲೆಗಳಿಂದ ದೂರ ಉಳಿದಿರುವ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಶಾಲೆಯತ್ತ ಕರೆತರುವ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದರು.

ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಪ್ರಪಂಚದ ಜ್ವಲಂತ ಸಮಸ್ಯೆಗಳಿಗೆ ಒಳ್ಳೆಯ ವ್ಯಕ್ತಿತ್ವದ ಮನುಷ್ಯನ ನಿರ್ಮಾಣವೇ ಸೂಕ್ತ ಪರಿಹಾರ. ಇದರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿಯೊಬ್ಬ ಶಿಕ್ಷಕ ಉದ್ಯಮಿ ನಾರಾಯಣ ಮೂರ್ತಿ, ಹೋರಾಟಗಾರ ಅಣ್ಣ ಹಜಾರೆ ಅವರಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡಿದರೆ ದೇಶದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ದೇಶ ಕಟ್ಟುವುದು ಎಂದರೆ ಕೇವಲ ರೈಲ್ವೆ ಮೇಲ್ಸೇತುವೆ, ಡ್ಯಾಂ, ಕಟ್ಟಡ ಕಟ್ಟುವುದಷ್ಟೇ ಅಲ್ಲ. ಮನುಷ್ಯರ ನಿರ್ಮಾಣವೂ ಬಹಳ ಮುಖ್ಯ. ಶಿಕ್ಷಕ ವೃತ್ತಿ ಲಾಭದಾಯಕ ವೃತ್ತಿಯಲ್ಲ ಹಾಗೂ ಯಾವುದೇ ವೃತ್ತಿಗೂ ಹೋಲಿಕೆ ಮಾಡುವ ವೃತ್ತಿಯೂ ಅಲ್ಲ. ಒಬ್ಬ ನಾಯಕ ಮತ್ತೊಬ್ಬ ನಾಯಕನನ್ನು ಸೃಷ್ಟಿಸಬೇಕೆ ಹೊರತು ಹಿಂಬಾಲಕರನ್ನಲ್ಲ. ಶ್ರಮಕ್ಕೆ ತಕ್ಕ ಫಲ ಸಿಗಬೇಕು. ಅದನ್ನ ಸಾಧಿಸಲು ಎಲ್ಲರಿಗೂ ಸಮಾನ ಅವಕಾಶ ಇರಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಯ 35 ಮಂದಿ ಖಾಸಗಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು