ಶುಕ್ರವಾರ, ಮೇ 29, 2020
27 °C
ಕಾಂಗ್ರೆಸ್ ಮುಖಂಡ ಎಂ.ಕೆ. ಶೇಷೇಗೌಡ ಹೇಳಿಕೆ

ಟೋಲ್ ಸಂಗ್ರಹ: 20ಕ್ಕೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅರಕಲಗೂಡು, ಪಿರಿಯಾಪಟ್ಟಣ, ನಿಲುವಾಗಿಲು ರಸ್ತೆಗಳಲ್ಲಿ ಸರ್ಕಾರ ಟೋಲ್ ಸಂಗ್ರಹಿಸಲು ಮುಂದಾಗಿರುವುದನ್ನು ಖಂಡಿಸಿ ವಿವಿಧ ಸಂಘ ಸಂಸ್ಥೆಗಳ ಒಟ್ಟುಗೂಡಿ ಜ.20ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಎಂ.ಕೆ. ಶೇಷೇಗೌಡ ಹೇಳಿದರು.

ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಬಡ ಜನರು ಹೆಚ್ಚಾಗಿ ಸಂಚಾರ ಮಾಡುತ್ತಿದ್ದು, ಟೋಲ್ ಸಂಗ್ರಹದಿಂದ ಬಡಜನರಿಗೆ ಹೊರೆಯಾಗುತ್ತದೆ. ಹಾಸನ– ಅರಕಲಗೂಡು ರಸ್ತೆ ಟೋಲ್ ಸಂಗ್ರಹಣೆಗೆ ಯೋಗ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಕೂಡ ಹಿಂದೆ ಹೇಳಿದ್ದರು. ಟೋಲ್‌ ಸಂಗ್ರಹ ಮಾಡದಂತೆ ಆಗ್ರಹಿಸಿ ಜ.20ರಂದು ಕಟ್ಟಾಯ, ನಿಲುವಾಗಿಲು, ಪಿರಿಯಾಪಟ್ಟಣದಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್ ಮಾತನಾಡಿ, ‌‘ಹಳೇಬೀಡು, ಹಾಸನ, ಅರಕಲಗೂಡು, ಪಿರಿಯಾಪಟ್ಟಣ ರಸ್ತೆಗಳು ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾಗಿವೆ. ಆದರೆ, ರಾಜಕೀಯ ಕಾರಣಗಳಿಗಾಗಿ ಅವರು ಇಂದಿಗೂ ರಾಜ್ಯ ಹೆದ್ದಾರಿಗಳಾಗೇ ಉಳಿದಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸನದಿಂದ ಅರಕಲಗೂಡಿಗೆ 30 ಕಿ.ಮೀ ಈ ಹಿಂದೆ 45ರಿಂದ 50 ನಿಮಿಷ ಬೇಕಿತ್ತು. ನೂರಾರು ಕೋಟಿ ಹಣ ವ್ಯಯಿಸಿ ನೂತನ ರಸ್ತೆ ನಿರ್ಮಾಣ ಮಾಡಿದ ನಂತರ ಅದೇ ರಸ್ತೆಯಲ್ಲಿ ಸಾಗಲು ಒಂದು ತಾಸು ತೆಗೆದುಕೊಳ್ಳುತ್ತದೆ. ರಸ್ತೆ ಅವೈಜ್ಞಾನಿಕವಾಗಿ ಕೂಡಿದೆ. 30 ಕಿ.ಮೀ. ವ್ಯಾಪ್ತಿಯಲ್ಲಿ 150 ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ರಸ್ತೆ ಬದಿ 15 ಕೆರೆಗಳಿದ್ದು, ಅವುಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಈ ರಸ್ತೆಗಳು ಸವಾರರು ಹಾಗೂ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ. ಹೀಗಾಗಿ, ಸರ್ಕಾರವು ಯಾವ ಮಾನದಂಡದ ಮೇಲೆ ಟೋಲ್ ಸಂಗ್ರಹಿಸುತ್ತದೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಗದೀಶ್, ಲೋಕೇಶ್, ರವಿ, ಯೋಗೇಶ್ ಇದ್ದರು.

‘ರೈಲ್ವೆ ಗೇಟ್ ನಿರ್ಮಿಸದ ದೇವೇಗೌಡ’

ಹಾಸನದಲ್ಲಿ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ ಸಂಸದರಾಗಿದ್ದಾರೆ. ಅರಕಲಗೂಡು, ಪಿರಿಯಾಪಟ್ಟಣ ಭಾಗದಲ್ಲಿ ಜೆಡಿಎಸ್ ಪಕ್ಷದವರೇ ಶಾಸಕರಾಗಿದ್ದಾರೆ. ರಾಜ್ಯದಲ್ಲಿನ ವಿವಿಧ ಹೋರಾಟಗಳಿಗೆ ಹೋಗುವ ಜನಪ್ರತಿನಿಧಿಗಳು ಜಿಲ್ಲೆಯ ಬಡ ಜನರ ಈ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಶೇಷೇಗೌಡ ದೂರಿದರು.

ಎಚ್‌.ಡಿ.ದೇವೇಗೌಡರು ಹಾಸನ ಕ್ಷೇತ್ರದಲ್ಲಿ 20 ವರ್ಷಗಳವರೆಗೆ ಸಂಸದರಾಗಿದ್ದರೂ ಹಾಸದಲ್ಲಿ ಒಂದು ರೈಲ್ವೆ ಗೇಟ್ ನಿರ್ಮಾಣ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಇಲ್ಲಿ
ಬಡವರು, ರೈತರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.