ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಹೇಮಗಂಗೋತ್ರಿ ವಿದ್ಯಾರ್ಥಿಗಳ ಹೋರಾಟಕ್ಕೆ ಗ್ರಾಮಸ್ಥರ ಬೆಂಬಲ

Last Updated 12 ಏಪ್ರಿಲ್ 2022, 15:41 IST
ಅಕ್ಷರ ಗಾತ್ರ

ಹಾಸನ: ನಗರದ ಹೊರವಲಯದ ಹೇಮ ಗಂಗೋತ್ರಿ ಕ್ಯಾಂಪಸ್ ಆವರಣದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಟ್ರಕ್ ಟರ್ಮಿನಲ್ ಸ್ಥಳಾಂತರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಐಡಿಎಸ್‍ಓ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಜತೆ ಕೆಂಚಟ್ಟಹಳ್ಳಿ ಗ್ರಾಮಸ್ಥರು ಭಾಗವಹಿಸಿ, ಯಾವುದೇ ಕಾರಣಕ್ಕೂ ಟ್ರಕ್ ಟರ್ಮಿನಲ್ ಗೆ ಅವಕಾಶ ಕೊಡಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ ಹೇಮಗಂಗೋತ್ರಿ ಸ್ನಾತಕೋತ್ತರ ಕ್ಯಾಂಪಸ್ ಆವರಣದ ಪಕ್ಕದಲ್ಲೇ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ಇದರ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ಟರ್ಮಿನಲ್‍ನಿಂದ ಹೆಣ್ಣು ಮಕ್ಕಳಿಗೆ ಸಾಕಷ್ಟು ತೊಂದರೆ ಆಗಲಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಉಂಟಾಗಿ ಶೈಕ್ಷಣಿಕ ಪರಿಸರವೂ ಹಾಳಾಗುತ್ತದೆ. ಆದ್ದರಿಂದ ಟ್ರಕ್ ಟರ್ಮಿನಲ್ ನಿರ್ಮಾಣವನ್ನು ಕೈ ಬಿಡಬೇಕು’ ಎಂದು ಮನವಿ ಮಾಡಿದರು.

‘ಟರ್ಮಿನಲ್ ನಿರ್ಮಾಣವಾದರೆ ಅಂಗಡಿಗಳು, ಡಾಬಾಗಳು, ಅಬಕಾರಿ ಚಟುವಟಿಕೆಗಳು ನಿರ್ಮಾಣವಾಗುತ್ತವೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಯಾಗುತ್ತದೆ. ಈಗಾಗಲೇ ಸರ್ಕಾರ ಹೊಸ ವಿಶ್ವವಿದ್ಯಾಲಯ ತೆರೆಯಲು ಅನುಮತಿ ನೀಡಿದ್ದು. ಮುಂದೆ ಹೇಮಗಂಗೋತ್ರಿ ನೂತನ ವಿಶ್ವವಿದ್ಯಾನಿಲಯ ಆಗಲಿದೆ. ಈ ಹಿನ್ನೆಲೆಯಲ್ಲಾದರೂ ಇದನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕು’ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

‘ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ ಕೆಂಚಟ್ಟಹಳ್ಳಿ ಗ್ರಾಮಸ್ಥರು, ಗ್ರಾಮ ವ್ಯಾಪ್ತಿಯಲ್ಲಿ 4 ಎಕರೆ ಗೋಮಾಳ ಇತ್ತು. ಅದನ್ನು ಶೈಕ್ಷಣಿಕ ಚಟುವಟಿಕೆಗಾಗಿ ಹೇಮ ಗಂಗೋತ್ರಿಗೆ ವಹಿಸಲಾಗಿದೆ. ಈ ಜಾಗದಲ್ಲಿ ಆಶ್ರಯ ನಿವೇಶನ ಕೊಡಿ ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೊಡಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಹಿಂಬರಹ ನೀಡಿದ್ದರು. ಆದರೀಗ ಅದೇ ಜಾಗಕ್ಕೆ ಹೊಂದಿಕೊಂಡಂತೆ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಇದರ ಉದ್ದೇಶ ಏನು’ ಎಂದು ಪ್ರಶ್ನಿಸಿದರು.

‘ಈ ಬಗ್ಗೆ ಯಾರಿಂದಲೂ ನಿಖರ ಮಾಹಿತಿ ಸಿಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೋರ್ಟ್‌ಗೆ ಹೋಗಿ ಅಂತಾರೆ. ಜಿಲ್ಲಾಡಳಿತ ಯಾರ ಒತ್ತಡಕ್ಕೂ ಮಣಿಯದೆ ಈ ಹಿಂದೆ ಇದ್ದಂತೆ ಗೋಮಾಳವನ್ನು ಹಾಗೆಯೇ ಉಳಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಕಪ್ಪಣ್ಣಗೌಡ, ಕುಮಾರ್, ಸುಶೀಲಮ್ಮ, ವಿದ್ಯಾರ್ಥಿಗಳಾದ ಅಮರ್, ಚೇತನ್ ಕೆ.ಜಿ., ದಯಾನಿಧಿ, ಸುಭಾಷ್, ಸಚಿನ್, ಯಶ್ವಂತ್, ಚೈತ್ರಾ, ನಿಶ್ಚಿತಾ, ಕಾಂತರಾಜ್, ಕೆ.ಎಂ.ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT