ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗ ಉಳಿಸಲು ಆಗ್ರಹ, ಅನಿರ್ದಿಷ್ಟಾವಧಿ ಧರಣಿ

ನಾಗತವಹಳ್ಳಿ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಧರಣಿ
Published 13 ಫೆಬ್ರುವರಿ 2024, 14:00 IST
Last Updated 13 ಫೆಬ್ರುವರಿ 2024, 14:00 IST
ಅಕ್ಷರ ಗಾತ್ರ

ಹಾಸನ: ಗ್ರಾಮದ ಸರ್ವೆ ನಂಬರ್ 54 ರಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಐಎಡಿಬಿ ಅಧಿಕಾರಿಗಳು ಅಕ್ರಮವಾಗಿ ಖಾಸಗಿಯವರಿಗೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ನಾಗತವಳ್ಳಿ ಗ್ರಾಮಸ್ಥರು ಮೀಸಲಿಟ್ಟಿದ್ದ ಜಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.

ಉದ್ಯಾನಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರು ಅತಿಕ್ರಮ ಪ್ರವೇಶ ಮಾಡಿ, ಗ್ರಾಮದ ಅನುಕೂಲಕ್ಕಾಗಿ ಇರುವ ಒಂದಿಷ್ಟು ಜಾಗವನ್ನು ಲಪಟಾಯಿಸಲು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಗ್ರಾಮದ ಸುನಿಲ್ ಮಾತನಾಡಿ, ಗ್ರಾಮಸ್ಥರ ಅನುಕೂಲಕ್ಕೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಉಳಿಸಿಕೊಳ್ಳಲು ಅನೇಕ ದಿನಗಳಿಂದ ಹೋರಾಟ ನಡೆಯುತ್ತಿದೆ. ಈವರೆಗೂ ಯಾವುದೇ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸಲು ಸ್ಥಳಕ್ಕೆ ಬಂದಿಲ್ಲ ಎಂದು ದೂರಿದರು.

ಪಹಣಿಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗ ಎಂದು ನಮೂದಾಗಿದ್ದರೂ ಕೆಲ ಖಾಸಗಿ ವ್ಯಕ್ತಿಗಳು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಖಾಸಗಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದರು. ಅದನ್ನು ಗ್ರಾಮಸ್ಥರು ತಡೆದು ಸ್ಥಳದಲ್ಲೇ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದರು.

ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೂ ಮನವಿ ಮಾಡಲಾಗಿದ್ದು, ಈವರೆಗೆ ನಮ್ಮ ಸಮಸ್ಯೆ ಬಗೆ ಹರಿಸಲು ಯಾರು ಮುಂದಾಗಿಲ್ಲ. ಯಾವುದೇ ಕಾರಣಕ್ಕೂ ಜಾಗವನ್ನು ಬಿಟ್ಟು ಕೊಡುವುದಿಲ್ಲ. ಉದ್ಯಾನದ ಜಾಗ ಉದ್ಯಾನಕ್ಕೆ ಉಳಿಯಬೇಕು. ಈ ನಿಟ್ಟಿನಲ್ಲಿ ನಾವೇ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದೇವೆ ಎಂದರು.

ಗ್ರಾಮದ ರೇಣುಕಮ್ಮ ಮಾತನಾಡಿ, ಸುತ್ತಲಿನ ಹತ್ತಾರು ಹಳ್ಳಿಗಳ ಅನುಕೂಲಕ್ಕೆ ಆಧಾರವಾಗಿರುವ ಜಾಗವನ್ನು ಅಧಿಕಾರಿಗಳು ಹಣ ಪಡೆದು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಮುಂದಾಗಿರುವುದು ಖಂಡನೀಯ.

ಖಾಸಗಿ ವ್ಯಕ್ತಿಗಳು ಗ್ರಾಮದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೇ ಗ್ರಾಮಸ್ಥರಿಗೆ ಬೆದರಿಕೆ ಹಾಕುವ, ಹಲ್ಲೆ ಮಾಡುವ ಪ್ರಕರಣಗಳು ನಡೆದಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು.

ಗ್ರಾಮಸ್ಥರಾದ ಪುಟ್ಟರಾಜು, ಪರಮೇಶ್, ದರ್ಶನ್, ರವಿ, ಸ್ವಾಮಿ, ಅಯ್ಯಪ್ಪ, ಮೋಹನ್, ಸುಮಂತ್, ರೋಹಿತ್, ಶಿವ, ಸಣ್ಣಮ್ಮ, ಸರೋಜಮ್ಮ, ಮಂಜುನಾಥ್, ರತ್ನಮ್ಮ, ಗಿಡ್ಡಮ್ಮ, ಅಶ್ವಿನಿ, ಪಾಪಮ್ಮ, ಸಣ್ಣಮ್ಮ, ಕಮಲಕ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT