ಶನಿವಾರ, ಆಗಸ್ಟ್ 13, 2022
27 °C
ಅಧಿಕಾರಿಗಳಿಗೆ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಸೂಚನೆ

ಕೈಮಗ್ಗ, ಜವಳಿ ಉದ್ಯಮಗಳಿಗೆ ಸಾಲ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಹಾಸನ: ಕೈಮಗ್ಗ ಮತ್ತು ಜವಳಿ ಉದ್ಯಮ ನಡೆಸುತ್ತಿರುವವರಿಗೆ ಸಹಾಯವಾಗುವಂತೆ ಹೊಸ ಯೋಜನೆಗಳ ಕುರಿತು ಅರಿವು ಮೂಡಿಸಿ, ಪೂರಕ ಸಾಲ ಸೌಲಭ್ಯ ಒದಗಿಸುವಂತೆ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ
ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸಿದ್ಧ ಉಡುಪು ತರಬೇತಿ ಕೇಂದ್ರಗಳಿಂದ ನಿರುದ್ಯೋಗಿ ಯುವಕ,
ಯುವತಿಯರಿಗೆ ಸಿದ್ದ ಉಡುಪು ತಯಾರಿಕೆಯಲ್ಲಿ ತರಬೇತಿ ನೀಡಿ ಜೀವನಾಧಾರಕ್ಕೆ ವ್ಯವಸ್ಥೆ ಕಲ್ಪಿಸಿ ಎಂದರು.

ಕೈಮಗ್ಗ ಮತ್ತು ಜವಳಿ ಉದ್ಯಮದಿಂದ ಈಗಾಗಲೇ ನಷ್ಟ ಅನುಭವಿಸಿ ಕಂಪನಿ ಮುಚ್ಚಿರುವವರಿಗೆ ಪೂರ್ಣ ಪ್ರಮಾಣದ
ಸಹಕಾರ ಮತ್ತು ಸಾಲ ಸೌಲಭ್ಯ ನೀಡಿ, ಮರಳಿ ಪ್ರಾರಂಭಿಸುವಂತೆ ಅರಿವು ಮೂಡಿಸಬೇಕು. ನಿರುದ್ಯೋಗಿಗಳಿಗೆ
ಉದ್ಯೋಗವಕಾಶ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗಂಗಾ ಕಲ್ಯಾಣ ಯೋಜನೆಯಿಂದ ಕೊಳವೆ ಬಾವಿ ಪಡೆದ ರೈತರ ಜಮೀನಿಗೆ ಭೇಟಿ ನೀಡಿ ಯಾವ ಬೆಳೆ ಬೆಳೆಯುತ್ತಿದ್ದಾರೆ, ಅದರಿಂದ ರೈತರಿಗೆ ಸಹಾಯವಾಗಿದೆಯೇ? ಎಷ್ಟು ಆದಾಯ ಪಡೆಯುತ್ತಿದ್ದಾರೆಯೇ? ಎಂಬುದನ್ನು ಪರಿಶೀಲಿಸಿ ಫೋಟೋ ತೆಗೆದು ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.

ಗಂಗಾ ಕಲ್ಯಾಣ ಇಲಾಖೆಯಡಿ ನೀಡಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಮಸ್ಯೆ ಆಗದಂತೆ ಸರ್ಕಾರದ ಆದೇಶದ
ಅನುಗುಣವಾಗಿ ವಿದ್ಯುತ್ ಕಂಬಗಳ ವ್ಯವಸ್ಥೆ ಮಾಡಬೇಕು. ಬಾಕಿ ಇರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ
ಶೀಘ್ರವಾಗಿ ನೀಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಕಳೆದ ಬಾರಿ ಬಾಲಕ ಹಾಗೂ ಬಾಲಕಿಯರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರ್ಣ ಪ್ರಮಾಣದ ಪ್ರವೇಶಾತಿ
ಆಗಿಲ್ಲ. ಹಾಗಾಗಿ ಹೆಚ್ಚಿನ ಪ್ರಚಾರ ಮಾಡುವ ಮೂಲಕ ನಿಗದಿತ ಸೀಟುಗಳು ಪ್ರವೇಶಾತಿ ಮೂಲಕ ಭರ್ತಿಯಾಗುವಂತೆ
ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಧರ್ ನಾಯಕ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ
ನಿರ್ದೇಶಕ ಮೆಹಬೂಬ್ ಪಾಷಾ, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜೀನೇಂದ್ರ, ಸಚಿವರ ಆಪ್ತ ಕಾರ್ಯದರ್ಶಿ ವಿಜಯ್ ಕುಮಾರ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.