ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಆಘಾತಕ್ಕೆ ಬೆಳೆಗಾರರು ತತ್ತರ: 4 ಸಾವಿರ ಹೆಕ್ಟೇರ್‌ ಕಾಫಿ ಬೆಳೆ ನಾಶ

ಹೆಚ್ಚುತ್ತಿರುವ ಕೊಳೆರೋಗದ ಆತಂಕ
ಸಂತೋಷ್‌ ಸಿ.ಬಿ.
Published : 15 ಆಗಸ್ಟ್ 2024, 7:56 IST
Last Updated : 15 ಆಗಸ್ಟ್ 2024, 7:56 IST
ಫಾಲೋ ಮಾಡಿ
Comments

ಹಾಸನ: ಈ ಬಾರಿ ಮಳೆಯ ಆಘಾತಕ್ಕೆ ಜಿಲ್ಲೆಯ ರೈತರು ಕಂಗಾಲಾಗಿದ್ದು, ಸಾಕಷ್ಟು ಬೆಳೆ ನಾಶದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಲೆನಾಡು, ಅರೆ ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿರುವ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಹವಾಮಾನ ವೈಪರೀತ್ಯ ಪರಿಣಾಮ ಬೀರುತ್ತಿದೆ. ಮಲೆನಾಡು ಭಾಗದ ಸಕಲೇಶಪುರ ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದು, ಕೃಷಿ, ತೋಟಗಾರಿಕಾ ಬೆಳೆಗೆ ಸಾಕಷ್ಟು ಹಾನಿ ಸಂಭವಿಸಿದೆ.

ಕಳೆದ ವರ್ಷ ಮಳೆ ಕೊರತೆಯಿಂದ ನಷ್ಟ ಅನುಭವಿಸಿದ ಕಾಫಿ ಬೆಳೆಗಾರರು, ಈ ಬಾರಿ ವಿಪರೀತ ಮಳೆಯಿಂದಾಗಿ ಶೇ 50 ರಷ್ಟು ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 41ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ವಿಪರೀತ ಮಳೆಯಿಂದಾಗಿ 4ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇ 25 ಕ್ಕೂ ಹೆಚ್ಚು ಬೆಳೆ ಹಾನಿ ಸಂಭವಿಸಿದೆ ಎಂದು ಕಾಫಿ ಮಂಡಳಿ ಅಂದಾಜಿಸಿದೆ ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕ ಶಕ್ತಿ ತಿಳಿಸಿದ್ದಾರೆ.

ಕೊಳೆ ರೋಗದಿಂದ ಶೇ 15ರಷ್ಟು ಕಾಫಿ ಬೆಳೆ ಹಾನಿ ಸಂಭವಿಸಿದ್ದು, ಭೌಗೋಳಿಕವಾಗಿ ಕಡಿಮೆ ಮಳೆ ಹಾಗೂ ಹೆಚ್ಚು ಮಳೆ ಬರುವ ಪ್ರದೇಶಕ್ಕೆ ಅನುಗುಣವಾಗಿ ಹಾನಿ ಪ್ರಮಾಣ ಹೆಚ್ಚಿಗೆ ಆಗುತ್ತಿದೆ ಎಂದು ತಿಳಿಸಿದರು.

ಮಳೆ ಬಂದು ನಿಂತಿದ್ದರೂ ಮುಂದಿನ ದಿನಗಳಲ್ಲಿ ಕೊಳೆರೋಗಕ್ಕೆ ಸಾಕಷ್ಟು ಕಾಫಿ ಬೆಳೆ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಬೆಳೆಗಾರರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸಲ್ಫರ್, ನೈಟ್ರೆಟ್, ಯೂರಿಯ ಗೊಬ್ಬರಗಳನ್ನು ಬಳಸುವಂತೆ ಕಾಫಿ ಮಂಡಳಿಯಿಂದ ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಗೊಬ್ಬರ ಬಳಸುವುದರಿಂದ ಗಿಡಗಳಿಗೆ ಅಗತ್ಯ ಪೌಷ್ಟಿಕಾಂಶ ದೊರೆಯಲಿದ್ದು, ಕಾಫಿ ಉದುರುವಿಕೆ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಕೇವಲ ಸಕಲೇಶಪುರ ಭಾಗದಲ್ಲಿ ಕಾಫಿ ಹಾನಿ ಪ್ರಮಾಣ ಹೆಚ್ಚಿದ್ದು, ಉಳಿದ ತಾಲ್ಲೂಕುಗಳಲ್ಲಿ ಹೆಚ್ಚು ನಷ್ಟ ಸಂಭವಿಸಿಲ್ಲ. 2–3 ದಿನಗಳಲ್ಲಿ ಕಾಫಿ ಮಂಡಳಿಯಿಂದ ನಷ್ಟದ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಲಾಗುವುದು. ಸರ್ಕಾರದಿಂದ ಈ ಹಿಂದೆ ನಿಗದಿಪಡಿಸಿರುವ ಹೆಕ್ಟೇರ್‌ಗೆ ₹18ಸಾವಿರ ಪರಿಹಾರ ವಿತರಣೆ ಮಾಡುವ ಸಾಧ್ಯತೆ ಇದೆ. ಮಂಡಳಿ ವರದಿ ಬಳಿಕ ಸರ್ಕಾರ ಪರಿಹಾರ ವಿತರಿಸುವ ಸೂಚನೆ ನೀಡಬಹುದು ಎಂದು ಹೇಳಿದರು.

ಬಿಡುವಿಲ್ಲದಂತೆ ಮಳೆ ಸುರಿಯುತ್ತಿರುವುದರಿಂದ ಎಲೆಕೋಸು ಗಡ್ಡೆ ಕಟ್ಟಲು ತೊಂದರೆಯಾಗಿದೆ.
ಬಿಡುವಿಲ್ಲದಂತೆ ಮಳೆ ಸುರಿಯುತ್ತಿರುವುದರಿಂದ ಎಲೆಕೋಸು ಗಡ್ಡೆ ಕಟ್ಟಲು ತೊಂದರೆಯಾಗಿದೆ.
ಜುಲೈ ಅಂತ್ಯಕ್ಕೆ 1025 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಪರಿಹಾರ ವಿತರಣೆ ಸಂಬಂಧ ಕೃಷಿ ತೋಟಗಾರಿಕೆ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲಾಗುತ್ತಿದೆ.
–ರಾಜ ಸುಲೋಚನಾ, ಜಂಟಿ ಕೃಷಿ ನಿರ್ದೇಶಕಿ
ಸಕಲೇಶಪುರ ಭಾಗದಲ್ಲಿ ಹೆಚ್ಚು ಪ್ರಮಾಣದ ಕಾಫಿ ಬೆಳೆ ನಷ್ಟ ಸಂಭವಿಸಿದ್ದು ಆದಷ್ಟು ಶೀಘ್ರವಾಗಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು.
–ಶಕ್ತಿ ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಉಪನಿರ್ದೇಶಕ
ಅರ್ಜಿ ಸಲ್ಲಿಸಿದರೂ ನಿಯಮದ ಪ್ರಕಾರ ಬಹುತೇಕ ರೈತರಿಗೆ ಪರಿಹಾರ ಧನ ದೊರಕುತ್ತಿಲ್ಲ. ಸಿಕ್ಕರೂ ಅತ್ಯಲ್ಪ ಪರಿಹಾರ ನೀಡುತ್ತಿದ್ದು ಇದನ್ನು ಹೆಚ್ಚಿಸಬೇಕು.
ಎನ್.ಎಸ್. ಮಂಜುನಾಥ್, ಕಾಫಿ ಬೆಳೆಗಾರ
ಬೇಸಿಗೆಯಲ್ಲಿ ಉತ್ತಮ ಮಳೆಯಾದ ಕಾರಣ ಕಾಫಿ ಫಸಲು ಉತ್ತಮವಾಗಿ ಬಂದಿತ್ತು. ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದರಿಂದ ಕಾಫಿ ಕಾಯಿ ಗಿಡದಲ್ಲೆ ಕೊಳೆತು ಉದುರುತ್ತಿದೆ.
–ಪ್ರೀತಂ ಸಕಲೇಶಪುರ ಕಾಫಿ ಬೆಳೆಗಾರ

1275 ಹೆಕ್ಟೇರ್‌ ಕೃಷಿ ತೋಟಗಾರಿಕೆ ಬೆಳೆ ನಾಶ

ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ 1025 ಹೆಕ್ಟೇರ್ ಕೃಷಿ ಮತ್ತು 250 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ಸೇರಿದಂತೆ 1275 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮತ್ತೆ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಅತಿ ಹೆಚ್ಚು ಮಳೆಯಾಗುವ ಮಲೆನಾಡು ಭಾಗದಲ್ಲಿ ಕಾಫಿ ಭತ್ತ ಅಡಿಕೆ ಕಾಳುಮೆಣಸು ಶುಂಠಿ ವಿಪರೀತ ಪ್ರಮಾಣದಲ್ಲಿ ಹಾನಿಗೀಡಾಗಿದ್ದು ಬೆಳೆ ಹಾನಿ ಕುರಿತಂತೆ ಅರ್ಜಿ ಸಲ್ಲಿಸುವಂತೆ ರೈತರಿಗೆ ಸರ್ಕಾರ ಇದುವರೆಗೆ ಸೂಚನೆ ನೀಡಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಿಯಮದ ಪ್ರಕಾರ ಬೆಳೆ ನಷ್ಟದ ಪರಿಹಾರ ಧನವನ್ನು ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT