ಗುರುವಾರ , ಮಾರ್ಚ್ 23, 2023
28 °C
ಹಸಿರಿನಿಂದ ಕಂಗೊಳಿಸುತ್ತಿರುವ ಕಾರೆಕೇರೆ ಕೃಷಿ ಮಹಾವಿದ್ಯಾಲಯ

ಹಾಸನ: ಮಳೆ ನೀರು, ಸೌರಶಕ್ತಿ ಬಳಕೆಯಲ್ಲಿ ಮಾದರಿ

ಕೆ.ಎಸ್.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮಳೆ ನೀರು ಸಂಗ್ರಹ, ಸೌರಶಕ್ತಿ ಬಳಕೆ ಹಾಗೂ ಜಾನುವಾರು ಸಾಕಣೆ ವಿಷಯದಲ್ಲಿ ಕಾರೇಕೆರೆ ಕೃಷಿ ಮಹಾವಿದ್ಯಾಲಯ ಮಾದರಿ ವ್ಯವಸ್ಥೆ ರೂಪಿಸಿದ್ದು, ಕ್ಯಾಂಪಸ್‌ ಆಕರ್ಷಣೆ ಕೇಂದ್ರವಾಗಿದೆ.

ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ 184 ಎಕರೆ ಪ್ರದೇಶದ ಹಾಸನ ಕೃಷಿ ಮಹಾವಿದ್ಯಾಲಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, 863 ಹೆಚ್ಚು ವಿದ್ಯಾರ್ಥಿಗಳು ಮತ್ತು 250 ಸಿಬ್ಬಂದಿ ಇದ್ದಾರೆ. ಬಿಎಸ್‌ಸಿ ಕೃಷಿ, ಬಿ ಟೆಕ್‌ ಜೈವಿಕ ತಂತ್ರಜ್ಞಾನ, ಬಿ ಟೆಕ್‌ ಆಹಾರ ತಂತ್ರಜ್ಞಾನ (ನಾಲ್ಕು ವರ್ಷ) ಕೋರ್ಸ್‌ಗಳಿಗೆ ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾಣೆ ಆಗಿದೆ. ಯುವಕರು, ಯುವತಿಯರ ಪ್ರತ್ಯೇಕ ಹಾಸ್ಟೆಲ್‌ಗಳಿದ್ದು, ಎರಡೂ ಕಡೆಗಳಲ್ಲಿ ಫಿಟ್‌ನೆಸ್‌ ಜಿಮ್ ಸೌಲಭ್ಯವಿದೆ. ವಿದ್ಯಾರ್ಥಿಗಳ ಪಾಲಕರು, ಅತಿಥಿಗಳು ಇಲ್ಲಿ ಕಡಿಮೆ ವೆಚ್ಚದಲ್ಲಿ ಕೊಠಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಮಳೆ ನೀರು ಸಂಗ್ರಹದಿಂದ ಶೇ 80ರಷ್ಟು ನೀರು ಕೃಷಿ ಕೆಲಸಗಳಿಗೆ ಬಳಕೆಯಾಗುತ್ತಿದೆ. 20 ಎಕರೆ ಪ್ರದೇಶದಲ್ಲಿನ ಗೋಡಂಬಿ ಬೆಳೆಗೆ ನೀರು ದೊರೆಯುತ್ತಿದೆ. ಕಟ್ಟಡಗಳ ಮೇಲೆ ಬಿದ್ದ ಮಳೆ ನೀರು ವ್ಯರ್ಥವಾಗದೆ ಭೂಮಿ ಸೇರುತ್ತದೆ. ಇದರಿಂದ ಐದು ಕೊಳವೆ ಬಾವಿಗಳು ಮರುಪೂರಣಗೊಂಡು ನೀರಿನ ಕೊರತೆ ನೀಗಿದೆ.

ಸಣ್ಣ ನೀರಾವರಿ ಇಲಾಖೆಯು ಕ್ಯಾಂಪಸ್‌ನಲ್ಲಿ ಎರಡು ಕೆರೆಗಳನ್ನು ನಿರ್ಮಿಸುತ್ತಿದೆ. ಐದೂವರೆ ಎಕರೆ ವಿಸ್ತಾರದ ಕೆರೆ ಪೂರ್ಣಗೊಂಡರೆ ಕೃಷಿ ಚಟುವಟಿಕೆಗೆ ಬಳಕೆಯಾಗದೆ ಉಳಿದಿರುವ ಭೂಮಿಯಲ್ಲಿಯೂ ಹಸಿರು ಕಾಣಬಹುದು.

ಎರಡೂವರೆ ವರ್ಷಗಳ ಹಿಂದೆ ಗ್ರಂಥಾಲಯ ಕಟ್ಟಡಕ್ಕೆ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಲಾಯಿತು. ಇಲ್ಲಿನ ಹಲವು ಬೀದಿ ದೀಪಗಳಿಗೆ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿರುವುದರಿಂದ ಎಲ್ಲಾ ರಸ್ತೆಗಳಲ್ಲೂ ಸೌರ ವಿದ್ಯುತ್‌ ದೀಪಗಳು 6– 8 ತಾಸು ಬೆಳಗುತ್ತಿವೆ. 

ದನದ ಕೊಟ್ಟಿಗೆ ರಬ್ಬರ್‌ ಮ್ಯಾಟ್ ಹಾಕಲಾಗಿದೆ. 35 ಕುರಿಗಳು, ಹಸು, ಎಮ್ಮೆ, ದನಗಳು ಇವೆ. ಮೇವು ಕತ್ತರಿಸುವ ಯಂತ್ರ ಹಾಗೂ ಹಾಲು ಕರೆಯುವ ಸಾಧನ ಇದೆ. ನಿತ್ಯ ಹಾಲಿನ ಉತ್ಪಾದನೆ 86 ಲೀಟರ್‌ಗೆ ಏರಿಕೆಯಾಗಿದೆ.

ಬಿತ್ತನೆ ದಿನದಂದು ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣ ನೋಡಬಹುದು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹೊಲ, ಗದ್ದೆಗೆ ಇಳಿದು ಕೆಲಸ ಮಾಡುತ್ತಾರೆ. ಕ್ಯಾಂಪಸ್‌ನಲ್ಲಿ ಬೆಳೆಯುವ ಅಜೊಲಾವನ್ನು ಹಸುಗಳಿಗೆ ನೀಡುತ್ತಿರುವುದರಿಂದ ಹಾಲಿನ ಗುಣಮಟ್ಟ ಮತ್ತು ಇಳುವರಿಯೂ ಹೆಚ್ಚಾಗಿದೆ.

ಬಯೋ ಮೆಟ್ರಿಕ್‌, ಸಿಸಿಟಿವಿ ಕ್ಯಾಮೆರಾ ಅಳವಡಿಕೆ
‘ಕೃಷಿ ಮಹಾವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ, ಸ್ವಚ್ಛತೆ, ಶಿಸ್ತಿಗೆ ಆದ್ಯತೆ ನೀಡಲಾಗಿದೆ. ಬಯೋಮೆಟ್ರಿಕ್ ವ್ಯವಸ್ಥೆ ಜಾರಿ, ಎಲ್ಲಾ ತರಗತಿಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಂತಿಮ ಬಿಎಸ್‌ಸಿ ಕೃಷಿ ವಿದ್ಯಾರ್ಥಿಗಳಿಗೆ ಸಮಗ್ರ ಕೃಷಿ ಪದ್ಧತಿ ಕೋರ್ಸ್‌ ಅನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಮಳೆ ನೀರು ಸಂಗ್ರಹದಿಂದ ನೀರಿನ ಕೊರತೆ ನೀಗಿದೆ. ಹಸುಗಳಿಂದ ಪಡೆದ ಹಾಲನ್ನು ನೌಕರರೇ ಪಡೆದುಕೊಳ್ಳುತ್ತಾರೆ. ಉಳಿಕೆ ಹಾಲನ್ನು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಲಾಗುತ್ತದೆ. ಎರೆಹುಳು ಗೊಬ್ಬರವನ್ನು ಕೆ.ಜಿ.ಗೆ ₹ 10 ರಂತೆ ಹಾಗೂ ಎರೆಹುಳುವನ್ನು ಕೆ.ಜಿಗೆ ₹400 ರಂತೆ ಮಾರಾಟ ಮಾಡಲಾಗುತ್ತಿದೆ’ ಎಂದು ಎಂದು ಕೃಷಿ ಮಹಾವಿದ್ಯಾಲಯದ ಡೀನ್‌.ಎನ್.ದೇವ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಚ್‌.ಡಿ.ರೇವಣ್ಣ ಅವರು ಜಿಲ್ಲಾ ಉಸ್ತುವಾರಿ ಆಗಿದ್ದಾಗ ನೀಡಿದ ಸಹಕಾರದಿಂದ ಎರಡು ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಹದಿನೈದು ಎಕರೆ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ವಿಧಾನವಾಗಿ ಟ್ರೆಂಚ್‌, ಬದು ನಿರ್ಮಿಸಲಾಗಿದೆ. ಇದರಿಂದ ಫಲವತ್ತಾದ ಮಣ್ಣು ಕೊಚ್ಚಿ ಹೋಗುವುದನ್ನು ತಪ್ಪಿಸುವುದರ ಜತೆಗೆ ಮಳೆ ನೀರು ಇಂಗಿ ತೋಟಗಾರಿಕೆ ಬೆಳೆಗಳಿಗೂ ಅನುಕೂಲವಾಗಲಿದೆ. ಕೃಷಿ ಕಾಲೇಜು ವಾರ್ಷಿಕ ₹ 5.53 ಲಕ್ಷಕ್ಕೂ ಕಡಿಮೆ ಆದಾಯ ಪಡೆಯುತ್ತಿತ್ತು. 2019–20ನೇ ಸಾಲಿನಲ್ಲಿ ರಾಗಿ, ತೊಗರಿ ಸೇರಿದಂತೆ ಪೌಷ್ಟಿಕಾಂಶವುಳ್ಳ ಧಾನ್ಯಗಳನ್ನು ಬೆಳೆದು ₹ 14 ಲಕ್ಷ ಆದಾಯ ಗಳಿಸಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು