ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವೇಗೌಡರ ವಿರುದ್ಧ ರಾಜಣ್ಣ ಹೇಳಿಕೆ ಖಂಡನೀಯ: ಕೆ.ಎಸ್‌. ಲಿಂಗೇಶ್‌

ಹೇಮಾವತಿ ನೀರು ತುಮಕೂರಿಗೆ ಹರಿಸಿದ್ದೇ ಸಾಧನೆ!
Published 6 ಏಪ್ರಿಲ್ 2024, 12:18 IST
Last Updated 6 ಏಪ್ರಿಲ್ 2024, 12:18 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ವಿರುದ್ಧ ಲಘುವಾಗಿ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ನಡೆ ಖಂಡನೀಯ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ತುಮಕೂರಿನಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ರಾಜಣ್ಣ ಅವರು ‘ಸಾಯುವ ವಯಸ್ಸಿನಲ್ಲಿ ಬಿಜೆಪಿ ಜೊತೆ ಮೈತ್ರಿ ಬೇಕಿತ್ತೆ’ ಎಂದು ಎಚ್.ಡಿ. ದೇವೇಗೌಡರ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ. ಇಂತಹ ಹೇಳಿಕೆಗಳು ಸರಿಯಲ್ಲ. ರಾಜಣ್ಣ ಅವರು ಬ್ರಹ್ಮ ಅಲ್ಲ.  ಗೌಡರು 92ರ ವಯಸ್ಸಿನಲ್ಲಿಯೂ ಪಕ್ಷಕ್ಕಾಗಿ ಹಾಗೂ ನಾಡಿನ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರಾಜಣ್ಣ ಅವರೂ  ಯುವಕರಲ್ಲ ಎಂಬುದನ್ನು ತಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯೊಂದಿಗೆ ಜೆಡಿಎಸ್‌ನವರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಟೀಕಿಸುತ್ತಾರೆ. ಈ ಹಿಂದೆ ದೇವೇಗೌಡರನ್ನು ಪ್ರಧಾನಿ ಮಾಡಲು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಯಾರೂ? ಕೇರಳದಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಜೊತೆ ಮೈತ್ರಿ ಮಾಡಿಕೊಂಡಿರುವುದು ಅಪವಿತ್ರವಲ್ಲವೇ ಎಂದು ಪ್ರಶ್ನಿಸಿದರು.

ದೇಶದ ಹಿತದೃಷ್ಟಿಯಿಂದ ದೇವೇಗೌಡರ ಅಣತಿಯಂತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಇದೇ ದೇವೇಗೌಡರು ರಾಜಣ್ಣ ಪರ ಪ್ರಚಾರ ಮಾಡದಿದ್ದರೆ, ಸೋಲನ್ನು ಅನುಭವಿಸಬೇಕಾಗಿತ್ತು ಎಂಬುದನ್ನು ರಾಜಣ್ಣ ಮರೆಯಬಾರದು. ನಾಯಕ ಸಮಾಜಕ್ಕೆ ದೇವೇಗೌಡರ ಕೊಡುಗೆ ಹೆಚ್ಚಿದೆ. ಇದರಿಂದಾಗಿ ಆಸಮುದಾಯದ 17ರಿಂದ 18 ಶಾಸಕರು ಆಯ್ಕೆಯಾಗಿದ್ದು, ಎರಡರಿಂದ ಮೂರು ಲೋಕಸಭಾ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ರಾಜಣ್ಣ ಅವರನ್ನು ಹಾಸನ ಹಾಗೂ ತುಮಕೂರನ್ನು ಲೋಕಸಭೆ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ, ಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವ ಭಯ ಅವರಿಗಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೇಮಾವತಿ ನದಿ ನೀರನ್ನು ರಾತೋರಾತ್ರಿ ತುಮಕೂರಿಗೆ ಹರಿಸಿದ್ದೇ ಸಾಧನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹೊಂದಾಣಿಕೆ ಇಲ್ಲದ ವಿಭಾಗವಾಗಿದೆ ಎಂದು ಟೀಕಿಸಿದರು .

ಜೆಡಿಎಸ್ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ ಮಾತನಾಡಿ, ಕಟ್ಟಾಯ ಅನ್ನು ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಲು ಜೆಡಿಎಸ್ ನಾಯಕರೇ ಕಾರಣ ಎಂದು ಶಾಸಕ ಶಿವಲಿಂಗೇಗೌಡ ಹಾಗೂ ಕಾಂಗ್ರೆಸ್ ವಕ್ತಾರ  ದೇವರಾಜೇಗೌಡ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಅಂದು ಕಟ್ಟಾಯ ಸಕಲೇಶಪುರ ಹಾಗೂ ಆಲೂರು ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡದಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗಿತ್ತು. ಬೆಂಗಳೂರಿಗೆ ತೆರಳಿ ಜೆಡಿಎಸ್ ವತಿಯಿಂದ ಪ್ರತಿಭಟನಾ ಪತ್ರವನ್ನು ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಮುಖಂಡ ಸೈಯದ್ ಅಕ್ಬರ್ ಮಾತನಾಡಿ, ಅಲ್ಪಸಂಖ್ಯಾತ ಮುಸ್ಲಿಮರಿಗಾಗಿ ಎಚ್.ಡಿ. ದೇವೇಗೌಡರ ಕೊಡುಗೆ ಅಪಾರವಿದೆ. ಆದರೆ ಕಾಂಗ್ರೆಸ್‌ನ ಕೊಡುಗೆ ಏನು ಎಂದು ಆ ಪಕ್ಷದ ನಾಯಕರು ಹೇಳಬೇಕು ಎಂದರು. ಜಗದೀಶ್, ವಿಶ್ವನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT