ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಇಪಿ ವಿರೋಧಿಸಿ ರೈತರ ಅರೆಬೆತ್ತಲೆ ಮೆರವಣಿಗೆ

ಒಪ್ಪಂದಕ್ಕೆ ಸಹಿ ಹಾಕದಂತೆ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯ
Last Updated 31 ಅಕ್ಟೋಬರ್ 2019, 15:26 IST
ಅಕ್ಷರ ಗಾತ್ರ

ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು.

ಹೇಮಾವತಿ ಪ್ರತಿಮೆಯಿಂದ ಎನ್‍ಆರ್ ವೃತ್ತ ಮಾರ್ಗವಾಗಿ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಆರ್‌ಸಿಪಿಇ ಒಪ್ಪಂದಕ್ಕೆ ಸಹಿ ಹಾಕಿದರೆ ಆಹಾರ ಮತ್ತು ಕೃಷಿ ಕ್ಷೇತ್ರಕ್ಕೆ ಅಪಾರ ನಷ್ಟವಾಗುತ್ತದೆ. ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಶೂನ್ಯಕ್ಕೆ ಇಳಿಯುತ್ತದೆ. ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಹವಣಿಸುತ್ತಿವೆ. ಇದರಿಂದ ದೇಶದ ಕೋಟ್ಯಂತರ ಸಣ್ಣ ರೈತರ ಅದರಲ್ಲೂ ಮಹಿಳೆಯರ ಜೀವನೋಪಾಯವನ್ನು ಬೆಂಬಲಿಸುವ ಹೈನುಗಾರಿಕೆ ಕ್ಷೇತ್ರಕ್ಕೂ ಅಪಾಯವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೀಜ ಉತ್ಪಾದನಾ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತವೆ. ದೇಶದ ರೈತರಿಗೆ ಮತ್ತು ಕಾರ್ಮಿಕರಿಗೆ ಸಹಾಯ ಮಾಡಿದರೆ ಸರ್ಕಾರದ ವಿರುದ್ಧವೇ ವಿದೇಶಿ ಕಂಪನಿಗಳು ಮೊಕದ್ದಮೆ ಹೂಡಬಹುದು. 2001ರ ಬೀಜ ಮತ್ತು ಸಸ್ಯ ತಳಿಗಳ ಸಂರಕ್ಷಣೆ ಕಾಯಿದೆ ಅಳಿಸಿ ಹಾಕಲು ಒಪ್ಪಂದ ಅನುಕೂಲ ಮಾಡಿಕೊಡುತ್ತದೆ ಎಂದು ಆರೋಪಿಸಿದರು.

ಅಲ್ಲದೇ ವಿದೇಶಿ ಹೂಡಿಕೆದಾರರು ಕೃಷಿ ಭೂಮಿ ಖರೀದಿಸಲು ಅನುಕೂಲವಾಗುತ್ತದೆ. ಸೂಪರ್ ಮಾರ್ಕೇಟ್ ಮತ್ತು ದೊಡ್ಡ ಕಂಪನಿಗಳು ನೇರ ಚಿಲ್ಲರೆ ವ್ಯಾಪಾರದಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಮಾರುಕಟ್ಟೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಆನೆಕರೆ ರವಿ, ಜಿಲ್ಲಾ ಘಟಕದ ಅಧ್ಯಕ್ಷ ಬಾಬು, ಕಾರ್ಯದರ್ಶಿ ಲತಾ, ಮುಖಂಡರಾದ ಮೀಸೆ ಮಂಜಣ್ಣ, ಮಹಮದ್ ಸಾದೀಖ್, ಅಂಗಡಿ ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT