ಭಾನುವಾರ, ಸೆಪ್ಟೆಂಬರ್ 19, 2021
23 °C
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಡದರವಳ್ಳಿ ಗ್ರಾಮಸ್ಥರು

ವೈದ್ಯರು, ಶುಶ್ರೂಷಕರ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ತಾಲ್ಲೂಕಿನ ಕಡದರವಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು, ಶುಶ್ರೂಷಕರು ಹಾಗೂ ಬೈಲಹಳ್ಳಿ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ  ಕಾಂಗ್ರೆಸ್‌ ಮುಖಂಡ ಬನವಾಸೆ ರಂಗಸ್ವಾಮಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಸಾಲಗಾಮೆ ಹೋಬಳಿ ಬೈಲಹಳ್ಳಿಯ ಪಶು ವೈದ್ಯಕೀಯ ಆಸ್ಪತ್ರೆಗೆ ವೈದ್ಯರು ವಾರದಲ್ಲಿ ಎರಡು ದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಲಾಗದೆ ತೊಂದರೆ ಅನುಭವಿಸಬೇಕಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ವೈದ್ಯರ ಕೊರತೆಯಿಂದ ಅನಾರೋಗ್ಯದಿಂದಾಗಿ ಅನೇಕ ಜಾನುವಾರುಗಳು ಸಾಯಬೇಕಾದ ಸ್ಥಿತಿ ಇದೆ. ಹಾಗಾಗಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಗಮನಹರಿಸಿ ಬೈಲಹಳ್ಳಿ ಗ್ರಾಮದ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

ಕಡದರವಳ್ಳಿಯಲ್ಲಿ ಆಸ್ಪತ್ರೆಗಾಗಿ ನಿರ್ಮಿಸಿರುವ ಕಟ್ಟಡ 7-8 ವರ್ಷಗಳಿಂದ ಪಾಳು ಬಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 23 ವರ್ಷಗಳಿಂದಲೂ ಸಾಮಾನ್ಯ ವೈದ್ಯರನ್ನು ನೇಮಕ ಮಾಡಿಲ್ಲ. ಇದುವರೆಗೂ ಒಬ್ಬ ವೈದ್ಯಾಧಿಕಾರಿ, ನರ್ಸ್ ಯಾರು ಇಲ್ಲ. ಸುತ್ತಮುತ್ತಲ ಗ್ರಾಮದ ನಿವಾಸಿಗಳ ಅನುಕೂಲಕ್ಕಾಗಿ ಜಿಲ್ಲಾಧಿಕಾರಿ ಕೂಡಲೇ ಪರಿಶೀಲನೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹಾಗೂ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಮುಖಂಡ ಬನವಾಸೆ ರಂಗಸ್ವಾಮಿ, ರವಿಕುಮಾರ್, ಗ್ರಾಮಸ್ಥರಾದ ಎಚ್.ಆರ್.ರವಿ, ಬಿ.ಇ.ಸಿದ್ಧು, ಬಿ.ಆರ್.ರಂಗನಾಥ್, ಸುಜನ್, ವಿರುಪಾಕ್ಷ, ಜನಾರ್ಧನ್, ಬೈರೇಶ್, ಸೋಮಶೇಖರ್, ವೆಂಕಟೇಶ್, ಪ್ರವೀಣ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.