ಸೋಮವಾರ, ಸೆಪ್ಟೆಂಬರ್ 27, 2021
21 °C
ಕೋವಿಡ್ ಮೂರನೇ ಅಲೆಗೆ ಸಿದ್ಧತೆ ಕೈಗೊಳ್ಳಲು ಶಾಸಕ ರೇವಣ್ಣ ಆಗ್ರಹ

100 ಹಾಸಿಗೆ ಮಕ್ಕಳಿಗೆ ಮೀಸಲಿಡಿ: ಶಾಸಕ ರೇವಣ್ಣ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವುದರಿಂದ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ನೂರು ಹಾಸಿಗೆ ಮಕ್ಕಳು ಮತ್ತು ತಾಯಂದಿರಿಗೆ ಹಾಗೂ ಸಮುದಾಯ ಆಸ್ಪತ್ರೆಗಳಲ್ಲಿ 15 ಹಾಸಿಗೆ ಮಕ್ಕಳಿಗೆ ಮೀಸಲಿಡಬೇಕು. ಎರಡನೇ ಅಲೆಗೆ ಸರ್ಕಾರ ಸರಿಯಾದ ಸಿದ್ಧತೆ ಮಾಡಿಕೊಳ್ಳದ ಕಾರಣ ಸಾಕಷ್ಟು ಸಾವು, ನೋವು ಸಂಭವಿಸಿದೆ. ರಾಜ್ಯದಲ್ಲಿ ಮೂವತ್ತು ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಆಸ್ಪತ್ರೆಗಳನ್ನು ಮೇಲ್ದರ್ಜಗೇರಿಸಲು ಬೇಕಾದ ಅನುದಾನ ಕೋರಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ₹ 15 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೂ ಕೋರಲಾಗಿದೆ. ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ ₹1 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು ಎಂದರು.

‘ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಏನು ಮಾಡಿದ್ರು’ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಹಾಸನ-ಬೆಂಗಳೂರು ನಾಲ್ಕು ಪಥದ ರಸ್ತೆ, ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಪಶು ವೈದ್ಯಕೀಯ ಕಾಲೇಜು, ಹೊಸ ಬಸ್‌ ನಿಲ್ದಾಣ ರೈಲ್ವೆ ಮೇಲ್ಸೇತುವೆ ಮಾಡಿದ್ದಾರೆ. ಬೆಂಗಳೂರು-ಮಂಗಳೂರು ರೈಲು ಸಂಚಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೊಡುಗೆ ಇದೆ ಎಂದು ಹೇಳಿದರು.

ಜಿಲ್ಲೆಗೆ ಯಡಿಯೂರಪ್ಪ ಏನು ದ್ರೋಹ ಮಾಡಿದ್ದಾರೆ ಎಂಬ ದಾಖಲೆಗಳನ್ನು ಅವರಿಗೆ ನೀಡುತ್ತೇನೆ. ದೊಡ್ಡವರ ಹೇಳಿಕೆಗೆ ಉತ್ತರ ನೀಡಲು ಹೋಗುವುದಿಲ್ಲ. 2007 ರಿಂದ ಹಾಸನ ಜಿಲ್ಲೆಗೆ ಏನೇನು ಅನ್ಯಾಯವಾಗಿದೆ ಎಂಬುದನ್ನು ದಾಖಲೆ ಸಮೇತ ಮುಂದಿನ ದಿನಗಳಲ್ಲಿ ವಿವರಿಸುತ್ತೇನೆ. ಬಕ್ರೀದ್ ಹಬ್ಬ ಇರುವ ಹಿನ್ನೆಲೆಯಲ್ಲಿ ಹಬ್ಬ ಮುಗಿದ ನಂತರ ಸಿ.ಎಂ ಜೊತೆ ಮಾತನಾಡುವುದಾಗಿ ದೇವೇಗೌಡರು ಹೇಳಿದ್ದಾರೆ. ಬಳಿಕ ವಿಮಾನ ನಿಲ್ದಾಣ ಹೋರಾಟ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ನಡೆಯಲಿದೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ನನಗೆ ಭವಿಷ್ಯ ಹೇಳಲು ಬರುವುದಿಲ್ಲ. ನಮ್ಮ ಬಳಿ ಕೊರವಂಜಿಗಳಿಲ್ಲ. ಮೂವರು ಕೊರವಂಜಿ ಸಿ.ಎಂ ಆಗುತ್ತೀರಾ ಎಂದು ಅವರಿಗೆ ಹೇಳಿದ್ದಾರೆ. ದೊಡ್ಡವರ ಕಥೆ ನನಗೆ ಬೇಕಿಲ್ಲ. ನಾನು ಹೊಳೆನರಸೀಪುರ ಕ್ಷೇತ್ರದ ಶಾಸಕ ಅಷ್ಟೇ’ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು