ಹಾಸನ: 2022 ರ ಜುಲೈ 1 ರಿಂದ 2024 ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ, ನೌಕರರಿಗೂ ಪರಿಷ್ಕೃತ 7 ನೇ ವೇತನ ಆಯೋಗದ ಆರ್ಥಿಕ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.
ವೇದಿಕೆಯ ಸದಸ್ಯ ಗೋಪಾಲ್ ಮಾತನಾಡಿ, ರಾಜ್ಯದ ಎಲ್ಲ ಸರ್ಕಾರಿ ಅಧಿಕಾರಿ, ನೌಕರರಿಗೆ ಏಳನೇ ವೇತನ ಜಾರಿ ಮಾಡಿರುವುದು ಸಂತಸದ ವಿಷಯ. ಆದರೆ 2022 ರ ಜುಲೈ 1 ರಿಂದ 2024 ಜುಲೈ 31ರವರೆಗೆ (25 ತಿಂಗಳ) ಅವಧಿಯಲ್ಲಿ ನಿವೃತ್ತರಾಗಿರುವ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಶ್ರೇಣಿಗಳ ಪರಿಷ್ಕರಣೆ ಅನ್ವಯ ಮಾಡುವಂತೆ ಹಲವು ಬಾರಿ ಮನವಿ ಮಾಡಿದರು ಪ್ರಯೊಜನವಾಗಿಲ್ಲ. ಆದ್ದರಿಂದ ಇಂದು ಧರಣಿ ನಡೆಸಲಾಗುತ್ತಿದೆ ಎಂದರು.
ಏಳನೇ ವೇತನ ಆಯೋಗದ ಶಿಫಾರಸು ಪರಿಗಣಿಸದೇ, ಹಳೆಯ ವೇತನ ಶ್ರೇಣಿಯ ಮೇಲೆ ನಿವೃತ್ತರನ್ನು ಪರಿಗಣಿಸುತ್ತಿದ್ದು, ಸಾವಿರಾರು ಸರ್ಕಾರಿ ನೌಕರರಿಗೆ ಅನ್ಯಾಯವಾಗಿದೆ ಎಂದರು.
ಪ್ರಸ್ತುತ ಸೇವೆಯಲ್ಲಿರುವ ಇತರ ಅಧಿಕಾರಿ, ನೌಕರರಂತೆ ನಾವು ಕೂಡ 2022 ರ ಜುಲೈ 1 ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸ ಬಾಕಿಯನ್ನು ಕೇಳುತ್ತಿಲ್ಲ. 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿ ಆರ್‌ಜಿ, ಕಮುಟೇಶನ್, ರಜೆ ನಗದು ಗಳಿಕೆ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸವನ್ನು ಮಾತ್ರ ಕೇಳುತ್ತಿದ್ದೇವೆ ಎಂದರು.
ಸರ್ಕಾರ ಕೂಡಲೇ ಪ್ರತಿ ನಿವೃತ್ತ ನೌಕರರಿಗೆ ಆಗುತ್ತಿರುವ ಲಕ್ಷಾಂತರ ರೂಪಾಯಿ ನಷ್ಟವನ್ನು ಅರ್ಥ ಮಾಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ, ವೇದಿಕೆಯ ಸದಸ್ಯರಾದ ಎಸ್ .ಬೋರೇಗೌಡ, ನಾಗರಾಜ್, ಹರೀಶ್, ಕುಮಾರ್, ಪುಟ್ಟಸ್ವಾಮಿ, ಬಾಲಲೋಚನ, ಮಂಜೇಗೌಡ, ಕೃಷ್ಣ, ಪ್ರಕಾಶ್, ವೆಂಕಟರಾಮು, ಕಾಂತರಾಜು, ಅಶೋಕ್ ಸೇರಿದಂತೆ ಇತರರು ಭಾಗವಹಿಸಿದ್ದರು.