ಸೋಮವಾರ, ಮಾರ್ಚ್ 20, 2023
30 °C
ಪ್ರತಿಭಟನೆಗೆ ಜೆಡಿಎಸ್‌, ಕಾಂಗ್ರೆಸ್‌ ಮುಖಂಡರ ಸಾಥ್‌

ಹಾಸನ: ಆಹಾರ ಕಿಟ್‌ ಪಡೆಯಲು ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಆಹಾರ ಕಿಟ್ ಪಡೆಯಲು ನೂರಾರು ಕಾರ್ಮಿಕರು ಗುರುವಾರ ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. 

ಕಚೇರಿ ಎದುರು ಕಿಟ್‌ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದ ಹಿನ್ನೆಲೆಯಲ್ಲಿ ಗೊಂದಲ ಸ್ಥಿತಿ ನಿರ್ಮಾಣವಾಯಿತು. ಮಧ್ಯಾಹ್ನವಾದರೂ ಅಧಿಕಾರಿಗಳು ಕಿಟ್‌ ವಿತರಣೆ ಮಾಡಲಿಲ್ಲ. ಇದರಿಂದ ಆಕ್ರೋಶ ಗೊಂಡ ಕಾರ್ಮಿಕರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. 

‘ಸರ್ಕಾರ ನೀಡಿರುವ ಆಹಾರ ಕಿಟ್‌ ಸರಿಯಾಗಿ ಹಂಚಿಕೆ ಮಾಡಿಲ್ಲ. ಫುಡ್‌ ಕಿಟ್‌ ನೀಡಬೇಕು’ ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಕಾರ್ಮಿಕರಿಗೆ ಬೆಂಬಲ ನೀಡಿದರು.

ಪೊಲೀಸರು ಪ್ರತಿಭಟನಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಇಲಾಖೆ ಗೇಟ್‌ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಿ, ಯಾರನ್ನು ಒಳಗೆ ಬಿಡಲಿಲ್ಲ.

‘ಜಿಲ್ಲೆಯಲ್ಲಿ ಅಂದಾಜು 59 ಸಾವಿರ ಜನ ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದು. ಹಾಸನ ತಾಲ್ಲೂಕಿನಲ್ಲಿಯೇ 23 ಸಾವಿರ ಜನ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಹಾಸನ ತಾಲ್ಲೂಕಿಗೆ 10 ಸಾವಿರ ಆಹಾರದ ಕಿಟ್ ಬಂದಿದ್ದು, ಅದನ್ನು ಹಾಸನ ಕ್ಷೇತ್ರದ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಹಾಗೂ
ಜೆಡಿಎಸ್‌ ಮುಖಂಡರು ಆರೋಪಿಸಿದರು.

ಕಾಂಗ್ರೆಸ್‌ ಮುಖಂಡರಾದ ಎಚ್‌.ಕೆ.ಮಹೇಶ್‌, ಬನವಾಸೆ ರಂಗಸ್ವಾಮಿ ಹಾಗೂ ಜೆಡಿಎಸ್ ಮುಖಂಡ ಅಗಿಲೆ ಯೋಗೇಶ್‌ ಅವರು ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಮತ್ತು ಕಾರ್ಮಿಕ ಇಲಾಖೆ ಉಪ ಆಯುಕ್ತ ಸೋಮಣ್ಣ ಜತೆ ಸಮಾಲೋಚನೆ ನಡೆಸಿದರು.

‘ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಬಂದಿದ್ದಾರೆ. ಕೇವಲ 500 ಕಿಟ್‌ ಮಾತ್ರ ಇದೆ. 4–5 ದಿನಗಳಲ್ಲಿ ಏಳು ಸಾವಿರ ಕಿಟ್‌ ತರಿಸಿಕೊಂಡು, ನಂತರ ವಿತರಿಸಲಾಗುವುದು’ ಎಂದು ಉಪ ಆಯುಕ್ತರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು