ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ಪುರಸಭೆ ಅಧಿಕಾರಿಗಳಿಗೆ ಶಾಸಕ ಸಿಮೆಂಟ್ ಮಂಜು ಸೂಚನೆ

ಪೌರ ಕಾರ್ಮಿಕ ಅರ್ಹ ಫಲಾನುಭವಿಗಳಿಗೆ ಶೀಘ್ರ ಮನೆ ಹಂಚಿಕೆ
Published 2 ಜುಲೈ 2023, 13:43 IST
Last Updated 2 ಜುಲೈ 2023, 13:43 IST
ಅಕ್ಷರ ಗಾತ್ರ

ಸಕಲೇಶಪುರ: ‘ಸ್ಲಮ್‌ ಬೋರ್ಡ್‌ನಿಂದ ಪೌರಕಾರ್ಮಿಕರಿಗೆ ನಿರ್ಮಾಣ ಮಾಡುತ್ತಿರುವ ವಸತಿ ಗೃಹಗಳನ್ನು ಶೀಘ್ರ ಫಲಾನುಭವಿಗಳಿ ಹಂಚಿಕೆ ಮಾಡಬೇಕು’ ಎಂದು ಶಾಸಕ ಸಿಮೆಂಟ್‌ ಮಂಜು ಸ್ಲಂ ಬೋರ್ಡ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದಲ್ಲಿ ಇತ್ತೀಚೆಗೆ ಪುರಸಭೆ ಕಚೇರಿಗೆ ಭೇಟಿ ನೀಡಿ ಪುರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ನೌಕರರಿಂದ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದರು.

 ‘ಕಳೆದ 6 ವರ್ಷಗಳಿಂದ 65 ಮನೆಗಳ ನಿರ್ಮಾಣ ಆಮೆ ನಡಿಗೆಯಲ್ಲಿವೆ. ಕಾಮಗಾರಿ ಗುಣಮಟ್ಟದಲ್ಲಿ ತೃಪ್ತಿ ಇಲ್ಲ ಎಂಬ ಮಾಹಿತಿ ಪೌರ ಕಾರ್ಮಿಕರಿಂದಲೇ ಕೇಳಿ ಬಂದಿದೆ. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಇಷ್ಟೊಂದು ವಿಳಂಬ ಮಾಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ಮನೆಗೆ ₹5.75 ಲಕ್ಷ ಖರ್ಚಾಗುತ್ತದೆ. ಕೇಂದ್ರ ಸರ್ಕಾರದಿಂದ ಪ್ರತಿ ಮನೆಗೆ ₹1.50 ಲಕ್ಷ ರಾಜ್ಯ ಸರ್ಕಾರದಿಂದ ₹2 ಲಕ್ಷ ಅನುದಾನ ನೀಡಲಾಗಿದೆ. ಉಳಿದ ಮೊತ್ತವನ್ನು ಫಲಾನುಭವಿ ತುಂಬಿಸಬೇಕು. ಅವರಿಗೆ ಬ್ಯಾಂಕ್‌ ಸಾಲ ಕೊಡಿಸಲಾಗುವುದು’ ಎಂದು ಸ್ಲಂ ಬೋರ್ಡ್ ಎಂಜಿನಿಯರ್‌ ಮಹದೇವ್‌ ಹೇಳಿದರು.

‘ಈ ಕೆಲಸ ಮಾಡುವುದಕ್ಕೆ ಇಷ್ಟು ವರ್ಷ ಬೇಕಾ, ಕಾಲಮಿತಿಯೊಳಗೆ ಏಕೆ ಮಾಡಲಿಲ್ಲ’ ಎಂದು ಶಾಸಕರು ಪ್ರಶ್ನೆ ಮಾಡಿದರು. ‘ಇನ್ನು ಮುಂದೆ ಇಂತಹ ವಿಳಂಬ, ನಿರ್ಲಕ್ಷ್ಯ ಸಹಿಸುವುದಿಲ್ಲ. ಮೂರು ದಿನಗಳಲ್ಲಿ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಆಗಬೇಕು. ಮಳೆ ಕಳೆಯುವುದರೊಳಗೆ ಬ್ಯಾಂಕ್‌ ಸಾಲ ಕೊಡಿಸಿ ಆ ಮನೆಗಳಲ್ಲಿ ಪೌರ ಕಾರ್ಮಿಕರು ಗೃಹ ಪ್ರವೇಶ ಮಾಡಬೇಕು’ ಎಂದರು.

ತಡೆಗೋಡೆ ಕುಸಿತ ತನಿಖೆಗೆ ಆದೇಶ: ‘ಪ್ರೇಮ ನಗರ ಬಡಾವಣೆಯಲ್ಲಿ ಕಳೆದ ವರ್ಷ ಸುಮಾರು ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ತಡೆಗೋಡೆ ಕಳಪೆ ಕಾಮಗಾರಿಯಿಂದ ಬಿದ್ದು ಹೋಗಿದೆ. ಈ ಕಾಮಗಾರಿ ನಿರ್ವಹಣೆ ಮಾಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದರು.

‘ಪಟ್ಟಣದ ಬಿ.ಎಂ.ರಸ್ತೆ, ಅಶೋಕ ರಸ್ತೆ (ವಾಸವಿ ದೇವಸ್ಥಾನ ರಸ್ತೆ) ಹಾಗೂ ಆಜಾದ್‌ ರಸ್ತೆಗಳಲ್ಲಿ ರಾತ್ರಿ 7.30ರಿಂದ 8 ಗಂಟೆ ಸುಮಾರಿಗೆ ಮನೆ ಮನೆ ಕಸ ಸಂಗ್ರಹಣೆ ಮಾಡುವ ವಾಹನದಿಂದ ಕಸ ಸಂಗ್ರಹಣೆ ಮಾಡಬೇಕು. ಇಲ್ಲವಾದರೆ ಅಂಗಡಿ ಮುಂಗಟ್ಟು ಹಾಗೂ ನಿವಾಸಿಗಳು ಕಸವನ್ನು ರಸ್ತೆಗೆ ತಂದು ಸುರಿಯುತ್ತಾರೆ. ಕಸ ಸಂಗ್ರಹಣೆ ಮಾಡುವುದರಿಂದ ರಸ್ತೆಗೆ ಕಸ ಹಾಕುವುದು ತಪ್ಪುತ್ತದೆ. ತ್ಯಾಜ್ಯ ವಿಲೇವಾರಿ ಮಾಡಿದ ವಾಹನಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ವಾಹನ ನಿಲ್ಲಿಸುವ ಸುತ್ತಮುತ್ತ ದುರ್ವಾಸನೆ ಹರಡುತ್ತದೆ’ ಎಂದರು.

ಶಾಸಕರಾಗಿ ಚುನಾಯಿತರಾದ ನಂತರ ಮೊದಲ ಬಾರಿಗೆ ಪುರಸಭೆಗೆ ಭೇಟಿ ನೀಡಿದ ಶಾಸಕರನ್ನು ಪುರಸಭೆ ಸದಸ್ಯರು,  ಅಧಿಕಾರಿಗಳು, ನೌಕರರು ಸನ್ಮಾನಿಸಿದರು. ಪೌರ ಕಾರ್ಮಿಕರು ಮನವಿ ಸಲ್ಲಿಸಿದರು.

ಮುಖಂಡರಾದ ಕಾಡಪ್ಪ, ಎಸ್‌.ಡಿ. ಆದರ್ಶ, ಯಾದ್‌ಗಾರ್‌ ಇಬ್ರಾಹಿಂ, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ, ಎಂಜಿನಿಯರ್ ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT