ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಬಿತ್ತನೆ: ಆಧುನಿಕತೆಯತ್ತ ಚಿತ್ತ

ಡ್ರಂ ಸೀಡರ್‌ನಲ್ಲಿ ಬಿತ್ತನೆ ನಡೆಸಿದ ಜಾನೇಕೆರೆ ರೈತರು
Last Updated 1 ಆಗಸ್ಟ್ 2020, 8:03 IST
ಅಕ್ಷರ ಗಾತ್ರ

ಸಕಲೇಶಪುರ: ಮಲೆನಾಡು ಪ್ರದೇಶವಾದ ಸಕಲೇಶಪುರದಲ್ಲೂ ಕೆಲವು ರೈತರು ಭತ್ತ ಬಿತ್ತನೆಯನ್ನೂ ಆಧು ನೀಕರಣಗೊಳಿಸಿದ್ದಾರೆ. ತಾಲ್ಲೂಕಿನ ಜಾನೇಕೆರೆ ಗ್ರಾಮದಲ್ಲಿ ಮೊದಲ ಬಾರಿಗೆ ಡ್ರಮ್‌ ಸೀಡರ್‌ ಮೂಲಕ ಭತ್ತ ಬಿತ್ತನೆ ಪ್ರಯೋಗ ಮಾಡಲಾಗಿದೆ.

ಈ ಭಾಗದ ರೈತರು ಸಾಂಪ್ರದಾಯಿಕ ಕ್ರಮವಾದ ಕೈ ನಾಟಿ ಪದ್ಧತಿಯನ್ನೇ ಅವಲಂಬಿಸಿದ್ದರು. ಆದರೆ, ಒಂದು ದಶಕ ದಿಂದೀಚೆಗೆ ಕೆಲವು ರೈತರು ಯಂತ್ರದ ಮೂಲಕವೂ ನಾಟಿ ಮಾಡು ತ್ತಿದ್ದಾರೆ. ಕೈ ನಾಟಿಗೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಕಾಡು ತ್ತಿದೆ. ಅಲ್ಲದೆ ಒಟ್ಟು ನಾಟಿ ಪ್ರಕ್ರಿಯೆಗೆ ಕಾರ್ಮಿಕರ ಅವಲಂಬನೆ ಹೆಚ್ಚು ಇದೆ.

ಕೈ ನಾಟಿಗೆ ಎಕರೆಗೆ ಸುಮಾರು 40 ರಿಂದ 50 ಕೆ.ಜಿ ಬೀಜದ ಭತ್ತ ಬೇಕು. ಒಂದು ಎಕರೆ ಭತ್ತ ಬೆಳೆದು ಬರುವ ಆದಾಯಕ್ಕಿಂತ ಉತ್ಪಾದನಾ ವೆಚ್ಚವೇ ಹೆಚ್ಚು. ವನ್ಯ ಜೀವಿಗಳಿಂದ ನಿರಂತರವಾಗಿ ಬೆಳೆ ಹಾನಿಯಾಗುತ್ತಿದೆ. ಇದರಿಂದಾಗಿ ತಾಲ್ಲೂಕಿನಲ್ಲಿ ಸುಮಾರು 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವುದನ್ನೇ ಕೆಲ ರೈತರು ನಿಲ್ಲಿಸಿದ್ದಾರೆ.

ಡ್ರಮ್‌ ಸೀಡರ್‌ ಆಶಾಕಿರಣ: ‘ಮೂಡಿಗೆರೆ ತಾಲ್ಲೂಕಿನಲ್ಲಿ ನಮ್ಮ ಸಂಬಂಧಿಯೊಬ್ಬರೂ ಸೇರಿದಂತೆ ಕೆಲವು ರೈತರು ಎರಡು ವರ್ಷಗಳಿಂದ ಡ್ರಮ್‌ ಸೀಡರ್‌ನಲ್ಲಿ ಭತ್ತ ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇತ್ತು. ನಾವೂ ಮೂಡಿಗೆರೆಯಿಂದ ಡ್ರಮ್‌ ಸೀಡರ್‌ ಖರೀದಿ ಮಾಡಿದ್ದೇವೆ. ಟ್ರಾಕ್ಟರ್‌ ಮತ್ತು ಟಿಲ್ಲರ್‌ನಲ್ಲಿ ಉಳುಮೆ ಮಾಡಿ ಮರ ಹೊಡೆದು ನಮ್ಮ ಎರಡು ಎಕರೆ ಗದ್ದೆಗೆ ನಾನು ಮತ್ತು ನನ್ನ ಸಹೋದರ ಸೇರಿ ನಾಲ್ಕು ಗಂಟೆಯಲ್ಲಿ ಭತ್ತ ಬಿತ್ತನೆ ಮಾಡಿದ್ದೇವೆ. ಉಳುಮೆ ಖರ್ಚು ಬಿಟ್ಟರೆ ಬೇರೆ ಯಾವುದೇ ಖರ್ಚು ಬಂದಿಲ್ಲ, ಒಂದು ಎಕರೆಗೆ ಕೇವಲ 10 ಕೆ.ಜಿ ಬೀಜದ ಭತ್ತ ಸಾಕು’ ಎಂದು ಗ್ರಾಮದ ಬಿ.ಆರ್‌.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಡ್ರಮ್‌ ಸೀಡರ್‌ ಅನ್ನು ಪ್ಲಾಸ್ಟಿಕ್‌ ನಿಂದಲೇ ತಯಾರಿಸಲಾಗಿದೆ. ಹೆಚ್ಚು ತೂಕವೂ ಇಲ್ಲ. ನಾಲ್ಕು ಡ್ರಂ ಗಳಿದ್ದು, 8 ಸಾಲು ಭತ್ತ ಬಿತ್ತನೆಯಾಗುತ್ತದೆ. ಪ್ರತಿ ಸಾಲಿಗೆ 8 ಇಂಚು ಅಂತರ ಇರುತ್ತದೆ. ನಾಲ್ಕು ಎಕರೆ ಪ್ರದೇಶವನ್ನು 7 ಗಂಟೆಯಲ್ಲಿ ಬಿತ್ತನೆ ಮಾಡಿದ್ದೇವೆ ಎಂದು ರೈತ ಜೆ.ಡಿ.ರಾಮಚಂದ್ರಾಚಾರ್‌ ಮಾಹಿತಿ ನೀಡಿದರು.

ಬಯಲು ಸೀಮೆಯಲ್ಲಿ ರೈತರು ಡ್ರಮ್‌ ಸೀಡರ್‌ನಲ್ಲಿ ಬಿತ್ತನೆ ಮಾಡುತ್ತಾರೆ. ಮಲೆನಾಡಿನ ಈ ಭಾಗದಲ್ಲಿ ಜಾನೇಕೆರೆ ರೈತರು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಬಿತ್ತನೆ ಮಾಡಿದ ಕನಿಷ್ಠ ಒಂದು ವಾರ ಅಧಿಕ ಮಳೆ ಬೀಳಬಾರದು. ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಜನಾರ್ದನ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT