ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಆರ್‌ಪಿ ಕಡತ ಜಿಲ್ಲಾಡಳಿತ ವಶಕ್ಕೆ: ಡಿ.ಸಿ

Last Updated 12 ಡಿಸೆಂಬರ್ 2020, 12:40 IST
ಅಕ್ಷರ ಗಾತ್ರ

ಹಾಸನ: ಹೇಮಾವತಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರ (ಎಚ್‌ಆರ್‌ಪಿ) ಹೆಸರಿನಲ್ಲಿ ಅಕ್ರಮ ಜಮೀನು
ಮಂಜೂರು ಮಾಡಿರುವ ಕುರಿತು ತನಿಖೆ ಚುರುಕುಗೊಂಡಿದ್ದು, ಎಲ್ಲ ಕಡತಗಳನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ಎಚ್‌ಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ 979 ಪ್ರಕರಣಗಳ ಪೈಕಿ 414 ಪ್ರಕರಣಗಳಲ್ಲಿ ಎಫ್‌ಐಆರ್‌ ಆಗಿದೆ. ಇದಕ್ಕೆ
ಸಂಬಂಧಿಸಿದ ಕಡತಗಳು ವರ್ಷದ ಹಿಂದೆಯೇ ಪೊಲೀಸ್‌ ವಶದಲ್ಲಿದೆ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸೂಚನೆಯಂತೆ ಎಲ್ಲಾ ಕಡತಗಳನ್ನು ಜಿಲ್ಲಾಡಳಿತದ ವಶಕ್ಕೆ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಬ್ಬರೇ ವ್ಯಕ್ತಿಗೆ ಎರಡು ಬಾರಿ ಜಮೀನು ಮಂಜೂರಾಗಿದೆಯೇ ಅಥವಾ ಸುಳ್ಳು ದಾಖಲೆ ಸಲ್ಲಿಸಿ ಜಮೀನು
ಪಡೆದುಕೊಂಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. 1970ರಲ್ಲಿಯೇ ಹೇಮಾವತಿ ಸಂತ್ರಸ್ತರಿಗೆ 78 ಸಾವಿರ ಎಕರೆ ಭೂಮಿ ಕಾಯ್ದಿರಿಸಲಾಗಿತ್ತು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡಿದ್ದಾರೆ. 50 ವರ್ಷ ಹಿಂದೆಯೇ ಜಮೀನು ಮೀಸಲಿಟ್ಟಿದ್ದರಿಂದ ಕೆಲವು ಕಡೆ ಮಾಜಿ ಸೈನಿಕರಿಗೂ ಜಮೀನು ನೀಡಿರುವ ಸಾಧ್ಯತೆ ಇದೆ. ಅಲ್ಲದೆ ಅರಣ್ಯ ಇಲಾಖೆಯ ಭೂಮಿ ಸಹ ಸೇರಿಕೊಂಡಿರಬಹುದು ಎಂದರು.

ಪ್ರಸ್ತುತ 2015 ರಿಂದ ಈಚೆಗೆ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. ಆ ವೇಳೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 19 ಜನ ತಹಶೀಲ್ದಾರ್‌ ಹಾಗೂ ಎಲ್ಲಾ ಅಧಿಕಾರಿಗಳ ಮಾಹಿತಿ ನೀಡಲಾಗಿದೆ. ತನಿಖೆ ವರದಿ ಆಧರಿಸಿ ಯಾರು ತಪ್ಪಿತಸ್ಥರು ಎಂಬುದು ನಿರ್ಧಾರವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭೂಮಿ ಮಂಜೂರಾತಿ ಕೋರಿ ಸಲ್ಲಿಸಿರುವ 560 ಕಡತಗಳ ಪರಿಶೀಲನೆ ನಡೆಯುತ್ತಿದೆ. ಅರ್ಜಿ ಸಲ್ಲಿಸಿರುವವರು
ನಿಜವಾದ ಸಂತ್ರಸ್ತರೇ ಎಂಬುದರ ಬಗ್ಗೆ ದಾಖಲೆ ಪರಿಶೀಲಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT