ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಗ ಮಳೆಯ ಕೊರತೆ: ಈಗ ಮೋಡದ ಕಾಟ- ಕಾಫಿ, ಮುಸುಕಿನ ಜೋಳ ಕೊಯ್ಲಿಗೆ ಹಿನ್ನಡೆ

ಎಂ.ಪಿ. ಹರೀಶ್
Published 27 ನವೆಂಬರ್ 2023, 6:06 IST
Last Updated 27 ನವೆಂಬರ್ 2023, 6:06 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನಲ್ಲಿ 15 ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಆಗಾಗ್ಗೆ ತುಂತುರು ಮಳೆ ಬೀಳುತ್ತಿರುವುದರಿಂದ ಮುಸುಕಿನ ಜೋಳ ಕಟಾವು ಮತ್ತು ಕಾಫಿ ಕೊಯ್ಲು ಮಾಡಲು ತೊಂದರೆಯಾಗಿದೆ.

ಜೋಳ ಕಾಳುಗಟ್ಟಿಯಾಗಿ ಸುಮಾರು ಒಂದೂವರೆ ತಿಂಗಳು ಕಳೆಯಿತು. ಕೆಲ ರೈತರು ಕಟಾವು ಮಾಡಿದಾಗ ತುಂತುರು ಮಳೆಯಾಗಿ ಜೋಳ ತೋಯ್ದಿತ್ತು. ಕಾಳು ಬಿಡಿಸಲು ಸಾಧ್ಯವಾಗದಿದ್ದಲ್ಲಿ, ಬೂಸಲಾಗಿ ಬಲೆಗಟ್ಟುತ್ತಿದೆ. ಜೋಳ ಕೊಯ್ಲು ಮಾಡಲು ಉತ್ತಮ ಬಿಸಿಲು ವಾತಾವರಣ ಇರಬೇಕು. ಮೋಡದ ವಾತಾವರಣದಲ್ಲಿ ಕೊಯ್ಲು ಮಾಡಿದರೆ ಒಣಗಿಸಲು ತೊಂದರೆಯಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ. ಮೋಡ ಕವಿದಿರುವುದರಿಂದ ಇನ್ನೂ ಜೋಳವನ್ನು ಕಟಾವು ಮಾಡಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಬಹುತೇಕ ಕೃಷಿ ಕಾರ್ಮಿಕರ ಮಕ್ಕಳು ಪಟ್ಟಣಕ್ಕೆ ಕೆಲಸ ಹುಡುಕಿಕೊಂಡು ವಲಸೆ ಹೋಗಿದ್ದು, ಸಕಾಲದಲ್ಲಿ ಕೊಯ್ಲು ಮಾಡಲು ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಕೃಷಿ ಮಾಡಲು ಕಾರ್ಮಿಕರ ಅಭಾವ ತೀವ್ರವಾಗಿದೆ. ಈ ಉದ್ದೇಶದಿಂದ ಹಲವು ರೈತರು ಯಾಂತ್ರಿಕ ಕೃಷಿಗೆ ಮಾರು ಹೋಗಿದ್ದಾರೆ.

ಆದರೆ ಜೋಳವನ್ನು ಯಂತ್ರದ ಮೂಲಕ ಬಿಡಿಸಲು ಪ್ರಯತ್ನಿಸಿದರೆ ಶೇ 30 ಕ್ಕೂ ಹೆಚ್ಚು ಮಾತೆಗಳು ಯಂತ್ರಕ್ಕೆ ಸಿಲುಕದೇ ಭೂಮಿಯಲ್ಲಿ ಉಳಿಯುತ್ತವೆ. ಹೊಲದಲ್ಲಿ ಉಳಿದ ಜೋಳವನ್ನು ಪುನಃ ಕಾರ್ಮಿಕರ ಸಹಾಯದಿಂದ ಆಯ್ದು, ಶೇಖರಿಸಿ ಕಾಳು ಬಿಡಿಸಬೇಕು. ಆಗ ಎರಡು ಪಟ್ಟು ಖರ್ಚಾಗುತ್ತದೆ. ಮಾರಾಟ ಮಾಡುವ ಸಂದರ್ಭದಲ್ಲಿ ಜೋಳ ಒಣಗಿಲ್ಲವೆಂಬ ಸಬೂಬು ಹೇಳುವ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಕೊಳ್ಳುತ್ತಾರೆ.

ಕಾಫಿ ಬೀಜ ಕೊಯ್ಲು ಪ್ರಾರಂಭವಾಗಿದೆ. ಒಂದೆಡೆ ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ತೋಟಕ್ಕೆ ಹೋಗಲು ಭಯಭೀತರಾಗಿದ್ದಾರೆ. ಕಾಡಾನೆಗಳ ಚಲನವಲನ ಗಮನಿಸಿ ಕಾಫಿ ಹಣ್ಣು ಕೊಯ್ಲು ಮಾಡಲಾಗುತ್ತಿದೆ. ಪಲ್ಪರ್ ಮಾಡಿದ ನಂತರ ಒಣಗಿಸಲು ಬಿಸಿಲು ಅವಶ್ಯಕವಾಗಿದೆ. ಬಿಸಿಲು ಇಲ್ಲದೇ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.

ಹವಾಮಾನ ವೈಪರಿತ್ಯವಾಗದೇ ಸಕಾಲಕ್ಕೆ ಸರಿಯಾಗಿ ಕೃಷಿ ಕೆಲಸಗಳಾದರೆ ರೈತರಿಗೆ ಯಾವುದೇ ನಷ್ಟವಾಗುವುದಿಲ್ಲ. ಕಾರ್ಮಿಕರ ಕೊರತೆ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ಎರಡು ದಶಕಗಳಿಂದ ರೈತರು ತೀವ್ರ ಸಂಕಷ್ಟಕ್ಕೆ ಎದುರಾಗುತ್ತಿದ್ದಾರೆ. ಕೃಷಿಯಲ್ಲಿ ಉಂಟಾಗುವ ನಷ್ಟವನ್ನು ಗಮನಿಸಿದರೆ ಸರ್ಕಾರ ಎಷ್ಟು ಸಹಕಾರ ನೀಡಿದರೂ ಸಾಲದು ಎನ್ನುತ್ತಾರೆ ರೈತ ಮುಖಂಡರು.

ಬಿತ್ತನೆಯಿಂದ ಕೊಯ್ಲು ಮಾಡುವವರೆಗೂ ಹವಾಮಾನ ವ್ಯತ್ಯಾಸದಿಂದ ಖರ್ಚು ಮಾಡಿರುವ ಹಣ ವಾಪಸ್‌ ಬರದಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು.

–ಕೌಶಿಕ್, ಮರಸುಹೊಸಹಳ್ಳಿ ಕೃಷಿಕ

ಪ್ರಸಕ್ತ ಸಾಲಿನಲ್ಲಿ ಹವಾಮಾನದಲ್ಲಿ ಭಾರಿ ವ್ಯತ್ಯಾಸವಾಗಿದೆ. ಅಳಿದು ಉಳಿದು ಬೆಳೆಯನ್ನಾದರೂ ಉಪಯೋಗಿಸಿಕೊಂಡು ತೃಪ್ತಿಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

–ಎಂ.ಡಿ. ಮನು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT