ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಾಂಶ ಇಟ್ಟುಕೊಂಡು ಟೀಕೆ ಮಾಡಬೇಕು: ಪ್ರತಿಪಕ್ಷಗಳಿಗೆ ಸಿದ್ದರಾಮಯ್ಯ ತಿರುಗೇಟು

Published 1 ಮಾರ್ಚ್ 2024, 11:04 IST
Last Updated 1 ಮಾರ್ಚ್ 2024, 11:04 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಒಟ್ಟು ₹ 1,344 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದೇವೆ. ಇದು ಟೀಕೆ ಮಾಡುವವರಿಗೆ ಉತ್ತರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳು ಇರಬೇಕು. ಆದರೆ, ಸತ್ಯಾಂಶಗಳನ್ನು ಇಟ್ಟುಕೊಂಡು ಟೀಕೆ ಮಾಡುವುದು ಆರೋಗ್ಯಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

 ₹62 ಸಾವಿರ ಕೋಟಿ ಹೆಚ್ಚಿನ ಆಯವ್ಯಯ ಮಂಡಿಸಿದ್ದೇವೆ. ಟೀಕೆ ಮಾಡುವವರು ವಸ್ತು ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು. ಬಜೆಟ್‌ ಗಾತ್ರ ₹62 ಸಾವಿರ ಕೋಟಿ ಹೆಚ್ಚಾಗಿದೆ ಎಂದರೆ, ಅಲ್ಲಿ ಅಭಿವೃದ್ಧಿ ಕಾಮಗಾರಿಗಳು ಇರಬೇಕು. ₹ 1.20 ಲಕ್ಷ ಕೋಟಿಯನ್ನು ಅಭಿವೃದ್ಧಿಗೆ ಮೀಸಲಿಡುವ ಕೆಲಸ ಮಾಡಲಾಗಿದೆ. ಇದರಲ್ಲಿ ₹52 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ. ಇನ್ನೂ ₹68 ಸಾವಿರ ಕೋಟಿಯನ್ನು ವಿವಿಧ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇಲ್ಲದೇ ಹೋದರೆ, ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.


ಕಳೆದ ವರ್ಷ ₹25 ಲಕ್ಷ ಕೋಟಿ ಜಿಡಿಪಿ ಇದ್ದು, ಈ ವರ್ಷ ₹ 28 ಲಕ್ಷ ಕೋಟಿ ಇದೆ. ಅಭಿವೃದ್ಧಿ ಆಗದೇ ಇದ್ದರೆ, ಅಭಿವೃದ್ಧಿಗೆ ಹಣ ಇಲ್ಲದೇ ಹೋಗಿದ್ದರೆ, ಜಿಡಿಪಿಯಲ್ಲಿ ಬೆಳವಣಿಗೆ ಆಗಲು ಸಾಧ್ಯವಿರಲಿಲ್ಲ. ಇದನ್ನು ಪ್ರತಿಯೊಬ್ಬರೂ ಆಲೋಚನೆ ಮಾಡಬೇಕು ಎಂದರು. ಇಡೀ ದೇಶದಲ್ಲಿ ಜಿಎಸ್ಪಿ ಕೊಡುವುದರಲ್ಲಿ ಕರ್ನಾಟಕ ನಂಬರ್‌ 1 ಸ್ಥಾನದಲ್ಲಿದೆ. ಗುಜರಾತ್‌ ರಾಜ್ಯದಲ್ಲಿ ಶೇ 7–8 ರಷ್ಟಿದೆ. ಮಹಾರಾಷ್ಟ್ರ ಶೇ 14, ಭಾರತದ ಸರಾಸರಿ ಶೇ 16. ಆದರೆ, ಕರ್ನಾಟಕ ಪಾಲು ಶೇ 18 ರಷ್ಟಿದೆ. ಜಿಎಸ್ಟಿ ಹೆಚ್ಚಾಗಿರುವುದಕ್ಕೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂದರು.

ಹಾಸನ ಜಿಲ್ಲೆಯಲ್ಲಿ ₹166 ಕೋಟಿಯನ್ನು ಶಕ್ತಿ ಯೋಜನೆಗೆ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ₹477 ಕೋಟಿ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ₹89 ಕೋಟಿ ಉಳಿತಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿ ₹135 ಕೋಟಿ ನೀಡಲಾಗಿದೆ. ಯುವನಿಧಿಗೆ 790 ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ಈ ಹಣ ಫಲಾನುಭವಿಗಳಿಗೆ ಉಳಿತಾಯವಾಗಿದ್ದು, ಇದನ್ನು ಅವರು ಖರ್ಚು ಮಾಡಲು ಸಾಧ್ಯವಾಯಿತು. ಇದರಿಂದಲೇ ಜಿಎಸ್ಟಿ ಪಾವತಿ ರಾಜ್ಯದಲ್ಲಿ ಹೆಚ್ಚಾಗಿದೆ ಎಂದರು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ದೇವಸ್ಥಾನಗಳಿಗೆ ಆದಾಯ ಹೆಚ್ಚಾಗಿದೆ ಎಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ ₹36 ಸಾವಿರ ಕೋಟಿ ಖರ್ಚು ಮಾಡಿದ್ದು, ಮುಂದಿನ ವರ್ಷ ₹59 ಸಾವಿರ ಕೋಟಿಯನ್ನು ಖರ್ಚು ಮಾಡಲಾಗುತ್ತಿದೆ. ಉಳಿತಾಯವಾಗುವ ಹಣ ಚಲಾವಣೆ ಆಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ ಎಂದರು.
ಶೇ 50 ರಷ್ಟು ಮಹಿಳೆಯರಿಗೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಎಲ್ಲ ವರ್ಗದ, ಎಲ್ಲ ಧರ್ಮದ ಜನರಿದ್ದಾರೆ. ಇದರಲ್ಲಿ ಯಾವುದೇ ಭೇದ ಮಾಡುತ್ತಿಲ್ಲ ಎಂದರು.

ಹಾಸನ ವಿಮಾನ ನಿಲ್ದಾಣವನ್ನು ₹195 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ನಮ್ಮ ಸರ್ಕಾರ ಬಂದ ಮೇಲೆ ₹50 ಕೋಟಿ ನೀಡಲಾಗಿದೆ. ಇನ್ನೂ ₹30 ಕೋಟಿ ನೀಡುತ್ತೇವೆ. ರಿಂಗ್‌ ರಸ್ತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಸನದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ.

ಹಾಸನದ ಜನರು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಂಡು, ಸಾಮಾಜಿಕ, ಆರ್ಥಿಕವಾಗಿ ಬೆಳೆಯಬೇಕು ಎಂದು ಹೇಳಿದರು.
ಅಭಿವೃದ್ಧಿಯಲ್ಲಿ ಯಾವುದೇ ರಾಜಕಾರಣವಿಲ್ಲ. ರಾಜ್ಯದ ಜನರ ತೆರಿಗೆ ಹಣವನ್ನೇ ನಾವು ಅಭಿವೃದ್ಧಿಗೆ ಕೊಡುತ್ತೇವೆ. ಇದನ್ನು ಕೇಳಿದರೆ, ಬಿಜೆಪಿಯವರಿಗೆ ಸಿಟ್ಟು. ಅದು ನರೇಂದ್ರ ಮೋದಿಯವರ ಹಣ. ಅದನ್ನು ಕೊಡಿ ಎಂದರೆ ಬಿಜೆಪಿಗೆ ಸಿಟ್ಟು ಎಂದು ತಿರುಗೇಟು ನೀಡಿದರು.
ಸಂವಿಧಾನದ ಉದ್ದೇಶಗಳಿಗೆ ಅನುಗುಣವಾಗಿ ಸರ್ಕಾರಗಳು ಕೆಲಸ ಮಾಡಬೇಕು. ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕು.ಯಾವುದೇ ಧರ್ಮದ ಜನರನ್ನು ದ್ವೇಷಿಸಬಾರದು. ಎಲ್ಲರನ್ನೂ ಪ್ರೀತಿಸಬೇಕು. ಎಲ್ಲ ಜಾತಿಯ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಬೇಕು. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT