ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಹೂಳು ತುಂಬಿದ ನಾಲೆಗಳು: ಹರಿಯದ ನೀರು

ಇದ್ದೂ ಇಲ್ಲದಂತಾದ ಏತ ನೀರಾವರಿ ಯೋಜನೆಗಳು: ದುರಸ್ತಿ ಕಾಣದ ವಿತರಣಾ ನಾಲೆಗಳು
Published 23 ಜೂನ್ 2024, 0:53 IST
Last Updated 23 ಜೂನ್ 2024, 0:53 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಎರಡು ನದಿಗಳು ಹರಿದಿವೆ. ಹೇಮಾವತಿ, ಕಾವೇರಿ ನದಿಗಳ ನೀರು ರೈತರ ಜಮೀನಿಗೆ ಹರಿಯಲು ನಾಲೆಗಳ ನಿರ್ಮಾಣವೂ ಆಗಿದೆ. ಹೇಮಾವತಿ, ವಾಟೇಹೊಳೆ, ಯಗಚಿಯಲ್ಲಿ ಜಲಾಶಯಗಳನ್ನು ನಿರ್ಮಿಸಿದ್ದು, ಅಲ್ಲಲ್ಲಿ ಏತ ನೀರಾವರಿ ಯೋಜನೆಗಳನ್ನೂ ರೂಪಿಸಲಾಗಿದೆ. ಆದರೆ, ಈ ನಾಲೆಗಳ ಮೂಲಕ ಜಮೀನುಗಳಿಗೆ ನೀರು ಹರಿಯುವುದು ಮಾತ್ರ ಮರೀಚಿಕೆಯಾಗಿದೆ.

ಕಳೆದ ವರ್ಷ ಬರಗಾಲ ಆವರಿಸಿದ್ದು, ಹೇಮಾವತಿ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿತ್ತು. ಅದಾಗ್ಯೂ ಒಂದೆರೆಡು ಬಾರಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಯಿತು. ಆದರೆ, ಪ್ರತಿವರ್ಷದಂತೆ ನಿರಂತರ ನೀರು ಹರಿಯದೇ ನಾಲೆಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಅಲ್ಲದೇ ನಾಲೆಗಳಲ್ಲಿ ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಅಲ್ಲಲ್ಲಿಯೇ ನೀರು ನಿಲ್ಲುತ್ತಿದ್ದು, ಜಲಾಶಯದಿಂದ ಹರಿಸಿದ ನೀರೂ ವ್ಯರ್ಥವಾಗುವಂತಾಗಿದೆ.

ಹಿರೀಸಾವೆ ಹೋಬಳಿಯ ಚನ್ನಹಳ್ಳಿ, ಮತಿಘಟ್ಟ, ಹಿರೀಸಾವೆ ಕೆರೆಗಳಿಗೆ ಮತ್ತು ಶ್ರವಣಬೆಳಗೊಳ ಹೋಬಳಿಯ ಹಲವು ಕೆರೆಗಳಿಗೆ ಜನಿವಾರ ಕೆರೆಯಿಂದ ಏತ ನೀರಾವರಿ ಮೂಲಕ ಹೇಮಾವತಿ ಅಣ್ಣೆಕಟ್ಟು ನೀರನ್ನು ಹರಿಸಬೇಕಿದೆ.

ಸುಮಾರು 8 ಕಿ.ಮೀ. ಪೈಪ್‌ಗಳ ಮೂಲಕ ನೀರು ಹರಿದು, ನಂತರ ಸುಮಾರು 6 ಕಿ.ಮೀ. ಕಾಲುವೆ ಮೂಲಕ ನೀರು ಕೆರೆಗಳಿಗೆ ಬರಬೇಕು. ನಾಲೆಯ ಕೆಲವು ಕಡೆ ಅಲ್ಲಲ್ಲಿ ಕಾಂಕ್ರೀಟ್ ಹಾಕಲಾಗಿದೆ. ಕಳೆದ ಎರಡು ವರ್ಷದಿಂದ ಕಾಲುವೆಗಳಲ್ಲಿ ನೀರು ಹರಿಯದೇ, ಹೂಳು ತುಂಬಿದೆ.

ಕಲ್ಲಿನ ಬಂಡೆಗಳು ಕಾಲುವೆಗೆ ಅಡ್ಡಲಾಗಿ ಬಿದ್ದಿವೆ. ಗಿಡಗಂಟಿಗಳು ಬೆಳೆದು ಕಾಲುವೆ ಮುಚ್ಚಿವೆ. ಚನ್ನಹಳ್ಳಿ, ಬೊಮ್ಮೇನಹಳ್ಳಿ ಬಳಿ ಕಾಲುವೆ ಎಂಬುದೇ ಪತ್ತೆಯಾಗದ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ಈ ವರ್ಷ ನೀರು ಹರಿಯಬೇಕಾದರೆ, ಕಾಲುವೆಯೂ ಸಂಪೂರ್ಣ ಸ್ವಚ್ಛವಾಗಬೇಕಿದೆ ಎನ್ನುತ್ತಾರೆ ಹೋಬಳಿಯ ರೈತರು.

ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು, ಶ್ರೀನಿವಾಸಪುರ, ಅಡಗೂರು ಗ್ರಾಮದಲ್ಲಿ ಹಾದುಹೋಗಿರುವ ಶ್ರೀರಾಮದೇವರ ನಾಲೆಯಲ್ಲಿ ಹೂಳು ತುಂಬಿದೆ. ನಾಲೆಯ ಅಕ್ಕಪಕ್ಕದಲ್ಲಿ ಗಿಡ, ಗಂಟೆಗಳು ಬೆಳೆದಿವೆ.

ಈಗಾಗಲೇ ನಾಲೆಗೆ ನೀರು ಹರಿಸಲಾಗಿದೆ. ಅಲ್ಲಲ್ಲಿ ಹೂಳು ತುಂಬಿರುವುದರಿಂದ ಕೊನೆಯ ಭಾಗಕ್ಕೆ ನೀರು ಸರಾಗವಾಗಿ ಹರಿಯುವುದಿಲ್ಲ. ಅಷ್ಟು ಮಾತ್ರವಲ್ಲ, ಸೊಳ್ಳೆಗಳು ಹೆಚ್ಚಾಗಿ ಡೆಂಗಿ ಹರಡುತ್ತಿದೆ. ನಾಲೆಯಲ್ಲಿ ಹೂಳು ಎತ್ತಬೇಕು. ಜೊತೆಗೆ ನಾಲೆಗೆ ಹೊಂದಿಕೊಂಡಂತೆ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಬೇಕು ಎಂಬ ಒತ್ತಾಯ ರೈತರದ್ದು.

ಹಳೇಬೀಡು, ಮಾದಿಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸುವ ಯಗಚಿ ಏತ ನೀರಾವರಿ ಯೋಜನೆಯ ನಾಲೆಗಳು ಸ್ವಚ್ಛತೆ ಕಾಣದೇ ಇರುವುದಿರುವುದರಿಂದ ಕೆರೆಗಳಿಗೆ ಸರಾಗವಾಗಿ ನೀರು ತಲುಪುತ್ತಿಲ್ಲ.

ನಾಲೆಗೆ ನೀರು ಬಿಟ್ಟಾಗ ಅಡಗೂರು. ಭಾಗದ ರೈತರು ತಮ್ಮ ಕೆಲಸ ಬಿಟ್ಟು ನಾಲೆಗೆ ಇಳಿದು ಸ್ವಚ್ಛ ಮಾಡುವುದು ಮಾಮೂಲಿಯಾಗಿದೆ. ನಾಲೆ ಸ್ವಚ್ಛತೆ ಮಾಡಲು ಟೆಂಡರ್ ಕರೆಯಲಾಗುವುದು ಎಂದು ಎಂಜಿನಿಯರ್‌ಗಳು ಹೇಳುತ್ತಾರೆ. ಆದರೆ ಕೆಲಸ ಕಾರ್ಯಗತವಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಯಗಚಿ ನಾಲೆ ಆಸುಪಾಸಿನಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಎತ್ತಿನಹೊಳೆ ನಾಲೆ ಕೆಲಸದ ಮಣ್ಣು ಯಗಚಿ ನಾಲೆಗೆ ತುಂಬುತ್ತಿದೆ. ಎತ್ತಿನಹೊಳೆ ಕೆಲಸಗಾರರು ನಾಲೆ ಸ್ವಚ್ಛತೆಗೆ ಕೈಹಾಕದೆ ತೊಂದರೆ ಕೊಡುತ್ತಿದ್ದಾರೆ ಎಂದು ವಿಜಯ್ ಕುಮಾರ್ ಮುತ್ತಯ್ಯ ದೂರಿದರು.

ಆಲೂರು ತಾಲ್ಲೂಕಿನಲ್ಲಿ ವಾಟೆಹೊಳೆ ಜಲಾಶಯದಿಂದ ಎಡದಂಡೆ 10 ಕಿ.ಮೀ. ಮತ್ತು ಬಲದಂಡೆ 37 ಕಿ.ಮೀ. ಮತ್ತು ನಾಕಲಗೂಡು ವಿತರಣಾ ನಾಲೆ 5 ಕಿ.ಮೀ. ನಾಲೆ ಇದೆ. ಬಲದಂಡೆ ನಾಲೆಯಿಂದ ಸುಮಾರು 15 ಗ್ರಾಮಗಳಿಗೆ ಒಳಪಟ್ಟಂತೆ 3,250 ರೈತರ 5ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸಲಾಗುವುದು. ಎಡದಂಡೆ ನಾಲೆಯಲ್ಲಿ ಸುಮಾರು 10 ಗ್ರಾಮಗಳ ರೈತರಿಗೆ ನೀರು ಹರಿಸಲಾಗುತ್ತಿದೆ.

ದಶಕಗಳ ಹಿಂದೆ ನಿರಂತರವಾಗಿ ಮಳೆ ಆಗುತ್ತಿದ್ದುದರಿಂದ ಪ್ರತಿ ವರ್ಷ ಜಲಾಶಯದಲ್ಲಿ ನೀರು ಭರ್ತಿಯಾಗುತ್ತಿತ್ತು. 5 ವರ್ಷಗಳಿಂದೀಚೆಗೆ ಜಲಾಶಯ ಭರ್ತಿಯಾಗಿರುವುದು ಅಪರೂಪವಾಗಿದೆ.
ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಜಿ.ಚಂದ್ರಶೇಖರ್, ಸಿದ್ದರಾಜು, ಹಿ.ಕೃ. ಚಂದ್ರು, ಎಚ್.ಎಸ್‌. ಅನಿಲ್‌ಕುಮಾರ್‌, ಎಂ.ಪಿ. ಹರೀಶ್‌

ಕಳೆ  ಹೂಳಿನಿಂದ ತುಂಬಿರುವ ಅಡಿಕೆ ಬೊಮ್ಮನಹಳ್ಳಿ ಏತನೀರಾವರಿ ನಾಲೆ

ಕಳೆ ಹೂಳಿನಿಂದ ತುಂಬಿರುವ ಅಡಿಕೆ ಬೊಮ್ಮನಹಳ್ಳಿ ಏತನೀರಾವರಿ ನಾಲೆ

ಹಳೇಬೀಡು ಮಾದಿಹಳ್ಳಿ ಹೋಬಳಿಯ ಕೆರೆಗಳಿಗೆ ಯಗಚಿ ಏತ ನೀರಾವರಿ ನಾಲೆಗಳ ಮುಖಾಂತರ ನೀರು ಹರಿಸುವ ಯಗಚಿ ಏತ ನೀರಾವರಿಯ ನಿಯಂತ್ರಕ.

ಹಳೇಬೀಡು ಮಾದಿಹಳ್ಳಿ ಹೋಬಳಿಯ ಕೆರೆಗಳಿಗೆ ಯಗಚಿ ಏತ ನೀರಾವರಿ ನಾಲೆಗಳ ಮುಖಾಂತರ ನೀರು ಹರಿಸುವ ಯಗಚಿ ಏತ ನೀರಾವರಿಯ ನಿಯಂತ್ರಕ.

ಹಿರೀಸಾವೆ ಹೋಬಳಿಯ ಬೊಮ್ಮೇನಹಳ್ಳಿ ಬಳಿ ಮತಿಘಟ್ಟ ಕೆರೆಗೆ ನೀರು ಹರಿಯುವ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ಮುಚ್ಚಿಹೋಗಿರುವುದು.

ಹಿರೀಸಾವೆ ಹೋಬಳಿಯ ಬೊಮ್ಮೇನಹಳ್ಳಿ ಬಳಿ ಮತಿಘಟ್ಟ ಕೆರೆಗೆ ನೀರು ಹರಿಯುವ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ಮುಚ್ಚಿಹೋಗಿರುವುದು.

ಹಿರೀಸಾವೆ ಹೋಬಳಿಯ ಚನ್ನಹಳ್ಳಿ ಬಳಿ ಏತ ನೀರಾವರಿ ಕಾಲುವೆಯಲ್ಲಿ ಹೂಳು ತುಂಬಿರುವುದು.

ಹಿರೀಸಾವೆ ಹೋಬಳಿಯ ಚನ್ನಹಳ್ಳಿ ಬಳಿ ಏತ ನೀರಾವರಿ ಕಾಲುವೆಯಲ್ಲಿ ಹೂಳು ತುಂಬಿರುವುದು.

ಚನ್ನರಾಯಪಟ್ಟಣ ತಾಲ್ಲೂಕು ಶ್ರೀನಿವಾಸಪುರ ಬಳಿ ಹಾದುಹೋಗಿರುವ ಶ್ರೀರಾಮದೇವರ ನಾಲೆಯಲ್ಲಿ ಹೂಳು ತುಂಬಿರುವುದು

ಚನ್ನರಾಯಪಟ್ಟಣ ತಾಲ್ಲೂಕು ಶ್ರೀನಿವಾಸಪುರ ಬಳಿ ಹಾದುಹೋಗಿರುವ ಶ್ರೀರಾಮದೇವರ ನಾಲೆಯಲ್ಲಿ ಹೂಳು ತುಂಬಿರುವುದು

ವಿತರಣಾ ನಾಲೆ ಹೂಳು ತೆರವು ಮಾಡಿ

ಅರಕಲಗೂಡು ತಾಲ್ಲೂಕಿನಲ್ಲಿ ಮುಖ್ಯವಾಗಿ ಹೇಮಾವತಿ ಬಲದಂಡೆ ಬಲ ಮೇಲ್ದಂಡೆ ಕಟ್ಟೇಪುರ ಹಾರಂಗಿ ನಾಲೆಗಳಿವೆ. ಹಲವರ ಜೇಬು ತುಂಬಿಸುವ ಕಾರಣದಿಂದಾದರೂ ಮುಖ್ಯ ನಾಲೆಗಳು ಆಗಾಗ ದುರಸ್ತಿ ಕಾಣುತ್ತವೆ. ಆದರೆ ವಿತರಣಾ ನಾಲೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಹೀಗಾಗಿ ರೈತರ ಜಮೀನಿಗೆ ವ್ಯವಸ್ಥಿತವಾಗಿ ನೀರು ಹರಿಯದೇ ರೈತರು ಬೆಳೆ ಬೆಳೆಯಲು ತೊಂದರೆಯಾಗಿದೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಒಂದು ದಶಕದಿಂದಲೂ ವಿತರಣಾ ನಾಲೆಗಳು ದುರಸ್ತಿ ಕಂಡಿಲ್ಲ. ನಾಲೆಯ ಹೂಳು ತೆಗೆದಿಲ್ಲ. ತೂಬು ಡ್ರಾಪ್ ನಿರ್ಮಿಸಿಲ್ಲ. ರೈತರು ಕಲ್ಲುಗಳನ್ನು ಅಡ್ಡ ಇಟ್ಟುಕೊಂಡು ಜಮೀನುಗಳಿಗೆ ನೀರು ಹಾಯಿಸಿ ಕೊಳ್ಳುವ ದುಸ್ಥಿತಿ ಇದೆ. ಮುಖ್ಯ ನಾಲೆಗಳಿಗೆ ಮಾತ್ರ ಗಮನ ನೀಡದೇ ವಿತರಣಾ ನಾಲೆಗಳ ಕಡೆಗೂ ಸರ್ಕಾರ ಹಾಗೂ ನೀರಾವರಿ ಇಲಾಖೆ ಗಮನ ನೀಡಬೇಕು. ರೈತರ ಜಮೀನಿಗೆ ನೀರು ಹರಿಸುವಲ್ಲಿ ವಿತರಣಾ ನಾಲೆಗಳ ಪಾತ್ರ ಬಹಳ ಮುಖ್ಯವಾಗಿದೆ. ರೈತನ ಜಮೀನಿಗೆ ನೀರು ಹರಿಯದೇ ಆತ ಬೆಳೆ ಬೆಳೆಯಲು ಸಾಧ್ಯವಾಗದೇ ಹೋದರೆ ಕೋಟ್ಯಂತರ ಹಣ ವ್ಯಯ ಮಾಡಿ ನೀರಾವರಿ ಯೋಜನೆಗಳನ್ನು ರೂಪಿಸಿ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದರು.

₹58 ಲಕ್ಷ ಅನುದಾನ

ನಾಲೆ ಸ್ವಚ್ಛತೆಗೆ ₹ 58 ಲಕ್ಷ ಅನುದಾನ ಬಿಡುಗಡೆಯಾಗಿದೆ. ಶ್ರೀರಾಮದೇವರ ನಾಲೆಯ ವ್ಯಾಪ್ತಿಯ ಶ್ರೀನಿವಾಸಪುರ ನಲ್ಲೂರು ಅಡಗೂರು ಚೋಳೇನಹಳ್ಳಿ ಬಳಿ ಹಾದು ಹೋಗಿರುವ ನಾಲೆಯ ಪಕ್ಕದ ಗಿಡಗಂಟೆಗಳನ್ನು ಕಿತ್ತುಹಾಕಲು ಅನುದಾನ ಮೀಸಲಿರಿಸಲಾಗಿದೆ. ಶೀಘ್ರದಲ್ಲಿ ಸ್ವಚ್ಛಗೊಳಿಸಿ ಹೂಳು ಎತ್ತಲಾಗುವುದು – ಎ.ಆರ್. ದೀಪು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹೇಮಾವತಿ ಎಡದಂಡೆ ನಾಲಾ ಉಪವಿಭಾಗ ಚನ್ನರಾಯಪಟ್ಟಣ

ಜಮೀನಿಗೆ ಹರಿಯದ ನೀರು

ಜಮೀನಿಗೆ ವ್ಯವಸ್ಥಿತವಾಗಿ ನೀರು ಹರಿಯದಿರುವುದರಿಂದ ಭತ್ತದಂತಹ ಆಹಾರ ಬೆಳೆ ಬೆಳೆಯಲು ರೈತರ ನಿರಾಸಕ್ತಿ ವಹಿಸಲು ಇದೂ ಒಂದು ಪ್ರಮುಖ ಕಾರಣವಾಗಿದೆ – ಸೀಬಳ್ಳಿ ಯೋಗಣ್ಣ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ

ಗಿಡಗಂಟೆ ತೆರವು ಮಾಡಿ

ನೀರಾವರಿ ಯೋಜನೆಯ ನಾಲೆಗಳನ್ನು ಎಂಜಿನಿಯರ್‌ಗಳು ನಿರ್ಲಕ್ಷಿಸಿದ್ದಾರೆ. ಪರಿಣಾಮವಾಗಿ ನಾಲೆಯಲ್ಲಿ ನೀರು ಬಿಟ್ಟರೆ ಕೆರೆಗೆ ನೀರು ತಲುಪುತ್ತಿಲ್ಲ. ನಾಲೆಯಲ್ಲಿ ತುಂಬಿದ ಮಣ್ಣು ಗಿಡಗಂಟೆ ತೆರವು ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ – ವಿಜಯ್ ಕುಮಾರ್ ಮುತ್ತಯ್ಯ ರೈತ ಸಂಘ ಬೇಲೂರು ತಾಲ್ಲೂಕು ಘಟಕದ ಕಾರ್ಯದರ್ಶಿ

₹50 ಲಕ್ಷ ಪ್ರಸ್ತಾವ

ಕಳೆದ ವರ್ಷ ಅಗತ್ಯ ಇರುವೆಡೆಯಲ್ಲಿ ಹೂಳು ತೆಗೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹೂಳು ತೆಗೆಯಲು ಸುಮಾರು ₹ 50 ಲಕ್ಷ ಅಂದಾಜುಪಟ್ಟಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. 1.5 ಟಿಎಂಸಿ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಸದ್ಯ 040 ಟಿಎಂಸಿ ನೀರು ಇದೆ – ಸಂದೀಪ್ ವಾಟೆಹೊಳೆ ಜಲಾಶಯ ಎಂಜಿನಿಯರ್

ನೀರು ಹರಿಯುತ್ತಿಲ್ಲ

ವಾಟೆಹೊಳೆ ಜಲಾಶಯ ಬಲದಂಡೆ ನಾಲೆಯಲ್ಲಿ ಹರಿಯುವ ನೀರು ಹುಣಸವಳ್ಳಿವರೆಗೆ ಮಾತ್ರ ನೀರು ಹರಿದು ಬರುತ್ತದೆ. ತಾಂತ್ರಿಕ ಕಾರಣದಿಂದ ಮುಂದುವರಿದ ನಾಲೆಯಲ್ಲಿ ನೀರು ಹರಿಯಲು ಸಾಧ್ಯವಾಗುತ್ತಿಲ್ಲ– ಮಿಥುನ್ ಮರಸು ಗ್ರಾಮದ ರೈತ.

ಕೆರೆಯಲ್ಲಿ ನೀರಿಲ್ಲ

ಚಿಕ್ಕಕಣಗಾಲು ಗ್ರಾಮದ ಆಜುಬಾಜಿನಲ್ಲಿರುವ ಕೆರೆಗೆ ನೀರು ಬರುತ್ತಿಲ್ಲ. ಕೆರೆಯಲ್ಲಿ ನೀರು ಸಂಗ್ರಹವಾದರೆ ಮಾತ್ರ ಕೃಷಿಗೆ ಅನುಕೂಲವಾಗುತ್ತದೆ– ಎಚ್.ವಿ. ನಾಗಭೂಷಣ ಚಿಕ್ಕಕಣಗಾಲು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT