ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ ‌| ಸಂಸದರ ಮುಂದೆ ಸವಾಲುಗಳ ಸಾಲು

ವಿಮಾನ ನಿಲ್ದಾಣ, ಪ್ರವಾಸೋದ್ಯಮ, ಕೈಗಾರಿಕೆಗಳ ಅಭಿವೃದ್ಧಿಗೆ ಬೇಕಿದೆ ವಿಶೇಷ ಮುತುವರ್ಜಿ
Published 8 ಜೂನ್ 2024, 6:52 IST
Last Updated 8 ಜೂನ್ 2024, 6:52 IST
ಅಕ್ಷರ ಗಾತ್ರ

ಹಾಸನ: ವಿಶಿಷ್ಟವಾದ ಭೌಗೋಳಿಕ ಲಕ್ಷಣ ಹೊಂದಿರುವ ಹಾಸನ ಜಿಲ್ಲೆ, ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆಯನ್ನು ಒಳಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ಒಂದಲ್ಲ ಒಂದು ರೀತಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು, ನೂತನ ಸಂಸದರ ಮೇಲೆ ಜಿಲ್ಲೆಯ ಜನರ ನಿರೀಕ್ಷೆಗಳು ಹೆಚ್ಚಾಗಿವೆ.

ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕುಂಟುತ್ತ ಸಾಗಿರುವ ಭುವನಹಳ್ಳಿ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಅನುದಾನ ಹಾಗೂ ವಿಶೇಷ ಕೊಡುಗೆ ನೀಡುವ ಸಂಬಂಧ ಜನರ ನಿರೀಕ್ಷೆ ಇದೆ. ಮಲೆನಾಡು ಭಾಗದಲ್ಲಿ ಜನರು, ರೈತರು, ಕಾಫಿ ಬೆಳೆಗಾರರ ನಿದ್ದೆಗೆಡಿಸಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯಾವ ರೀತಿಯ ಯೋಜನೆಗಳನ್ನು ಸಂಸದರು ತರಲಿದ್ದಾರೆ ಎನ್ನುವ ಕಾತರ ಹೆಚ್ಚಿದೆ.

ಹಾಸನ ನಗರದ ಪ್ರಮುಖ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುಂಟುತ್ತ ಸಾಗಿದ್ದು, ಎರಡು ಬದಿಯ ರಸ್ತೆ ಪೂರ್ಣಗೊಳ್ಳಲು ₹ 48 ಕೋಟಿ ಅಗತ್ಯವಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಕೊಡದೇ ಇರುವುದರಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದೀಗ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಈಗಲಾದರೂ ಅನುದಾನ ಒದಗಿಸಿ, ಯೋಜನೆ ಪೂರ್ಣಗೊಳಿಸುವ ಕೆಲಸ ಮಾಡಬೇಕು ಎನ್ನುವ ಒತ್ತಾಯ ಜನರದ್ದಾಗಿದೆ.

ಶಿಲ್ಪಕಲೆಗಳ ತವರು ಬೇಲೂರು, ಹಳೇಬೀಡು, ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ್ದು, ಇವುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ ಸಿಗಬೇಕಿದೆ. ಪ್ರವಾಸೋದ್ಯಮ ಉತ್ತೇಜನಕ್ಕೆ ಅಗತ್ಯ ಅನುದಾನ ಒದಗಿಸುವ ನಿಟ್ಟಿನಲ್ಲಿ ಯಾವ ರೀತಿಯ ಯೋಜನೆಗಳನ್ನು ಸಂಸದರ ತರಲಿದ್ದಾರೆ ಎಂಬುದರ ಬಗ್ಗೆ ಜನರ ಆಸಕ್ತಿ ಹೆಚ್ಚಿದೆ.

ಹಾಸನದಲ್ಲಿ ಐಐಟಿ ಸ್ಥಾಪನೆಗೆ ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿದ್ದು, ಈಗಾಗಲೇ ಸಾವಿರ ಎಕರೆಗೂ ಹೆಚ್ಚು ಜಮೀನು ಕಾದಿರಿಸಲಾಗಿದೆ. ಈ ಭಾಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆ ಇದ್ದು, ಐಐಟಿ ಸ್ಥಾಪಿಸುವ ಮೂಲಕ ಬೆಂಗಳೂರಿನ ಹೊರವಲಯದಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸಂಸದರು ಕಾರ್ಯೋನ್ಮುಖರಾಗಬೇಕು ಎನ್ನುವ ಒತ್ತಾಯ ಜನರದ್ದು.

ಹಾಸನ- ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಪೂರ್ಣಗೊಳ್ಳಲು ಮತ್ತಷ್ಟು ಉತ್ತೇಜನದ ಅವಶ್ಯಕತೆ ಇದೆ. ಬೇಲೂರುವರೆಗಿನ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳಿಗೆ ಅಗತ್ಯ ಅನುದಾನದ ಅವಶ್ಯಕತೆ ಇದೆ. ಹಾಸನದಿಂದ ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ವಿಸ್ತರಿಸುವ ಯೋಜನೆಗೆ ಅನುಮೋದನೆ ದೊರೆತಿದೆ. ಈ ಬಗ್ಗೆಯೂ ತ್ವರಿತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಈ ಮೂಲಕ ಬೇಲೂರಿನ ಸಂಪರ್ಕವನ್ನು ಮತ್ತಷ್ಟು ಸುಗಮ ಮಾಡಲು ಸಾಧ್ಯವಾಗಲಿದೆ.

ಸಕಲೇಶಪುರ, ಆಲೂರು, ಬೇಲೂರು, ಮೂಡಿಗೆರೆ, ಚಿಕ್ಕಮಗಳೂರಿಗೆ ಸಂಬಂಧಪಟ್ಟಂತೆ ಕಾಫಿ ಬೆಳೆಗಾರರ ಹಲವು ವರ್ಷಗಳ ಬೇಡಿಕೆಯಾದ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಬಹುತೇಕ ಕಾಫಿ ಬೆಳೆಗಾರರಲ್ಲಿ ನಿರೀಕ್ಷೆ ಹೆಚ್ಚಿದ್ದು, ಹೊಸ ಸಂಸದರು ತಮ್ಮ ಬೇಡಿಕೆಗಳ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

ಸಕಲೇಶಪುರ ತಾಲ್ಲೂಕಿನ ತೋಟಕ್ಕೆ ನುಗ್ಗುವ ಕಾಡಾನೆ ಕಾಫಿ ಹಾಗೂ ಕಾಳು ಮೆಣಸಿಗೆ ಹಾನಿ ಮಾಡುತ್ತಿವೆ.
ಸಕಲೇಶಪುರ ತಾಲ್ಲೂಕಿನ ತೋಟಕ್ಕೆ ನುಗ್ಗುವ ಕಾಡಾನೆ ಕಾಫಿ ಹಾಗೂ ಕಾಳು ಮೆಣಸಿಗೆ ಹಾನಿ ಮಾಡುತ್ತಿವೆ.

ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ಅಗತ್ಯ ಎರಡನೇ ಹಂತದ ನಗರಗಳಲ್ಲಿ ಪ್ರಮುಖವಾಗಿರುವ ಹಾಸನದ ಸುತ್ತ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳಿವೆ. ಎರಡು ನದಿಗಳು ಹರಿದಿದ್ದು ರೈಲು ರಸ್ತೆ ಸಂಪರ್ಕ ಉತ್ತಮವಾಗಿದೆ. ಇದೀಗ ವಿಮಾನ ನಿಲ್ದಾಣ ಕಾಮಗಾರಿಯೂ ಅಂತಿಮ ಹಂತದಲ್ಲಿದೆ. ಅಲ್ಲದೇ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿರುವ ಹಾಸನ ಜಿಲ್ಲೆಗೆ ವಿದೇಶಿ ಉದ್ಯಮಗಳನ್ನು ಕರೆತರುವುದು ಕಷ್ಟದ ಕೆಲಸವೇನಲ್ಲ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು. ಹೇರಳ ಮಾನವಸಂಪನ್ಮೂಲ ಕಚ್ಚಾ ವಸ್ತುಗಳ ಲಭ್ಯತೆ ಇರುವುದರಿಂದ ಹಾಸನ ಜಿಲ್ಲೆಯಲ್ಲಿ ತೆಂಗು ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಒಳ್ಳೆಯ ಅವಕಾಶಗಳಿವೆ. ಈಗಾಗಲೇ ಅರಸೀಕೆರೆ ಹಾಸನದಲ್ಲಿ ಕೆಲ ಬಟ್ಟೆ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು ಜವಳಿ ಪಾರ್ಕ್‌ ಸ್ಥಾಪನೆ ಮಾಡಲು ಸಂಸದರು ಮುಂದಾಗಬೇಕು. ಈ ಮೂಲಕ ಜಿಲ್ಲೆಯ ನಿರುದ್ಯೋಗಿ ಮಹಿಳೆಯರು ಪುರುಷರಿಗೆ ಉದ್ಯೋಗ ಅವಕಾಶ ಒದಗಿಸಬೇಕು ಎನ್ನುವುದು ಜನರ ಬೇಡಿಕೆ.

ವನ್ಯಜೀವಿ–ಮಾನವ ಸಂಘರ್ಷ ನಿವಾರಣೆ ಮಲೆನಾಡು ಭಾಗದ ಜನರ ನೆಮ್ಮದಿಗೆ ಕಂಟಕವಾಗಿರುವ ಕಾಡಾನೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕಿದೆ. ಇದಕ್ಕೆ ನೂತನ ಸಂಸದ ಶ್ರೇಯಸ್ ಪಟೇಲ್‌ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯವಾಗಿದೆ. ರಾಜ್ಯ ಸರ್ಕಾರದ ಬಳಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಈಗಾಗಲೇ ಹೇಳಿದೆ. ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದರೆ ಪರಿಹಾರ ಸಾಧ್ಯವಾಗಲಿದೆ. ಇದೊಂದು ಗಂಭೀರ ವಿಚಾರವಾಗಿದ್ದು ಪ್ರತಿ ಬಾರಿ ಆನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಒದಗಿಸುವುದು ನಂತರ ಕೈ ಚೆಲ್ಲಿ ಕೂರುವುದು ಸಾಮಾನ್ಯವಾಗಿದೆ. ಬರುವ ದಿನಗಳಲ್ಲಾದರೂ ಕೇಂದ್ರದಿಂದ ಅನುದಾನ ಪಡೆದು ಕಾಡು ವಿಸ್ತರಣೆ ಮಾಡುವ ಯೋಜನೆಯನ್ನು ರೂಪಿಸಬೇಕಾಗಿದೆ ಎನ್ನುತ್ತಾರೆ ಪರಿಸರವಾದಿ ಕಿಶೋರ್‌ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT