ಗುರುವಾರ , ಫೆಬ್ರವರಿ 25, 2021
20 °C
ಜಖಂಗೊಂಡ ದ್ವಾರಸಮುದ್ರ ಕೆರೆ ಏರಿ ವೀಕ್ಷಿಸಿದ ಸಚಿವ

ಕೆರೆ ಅಭಿವೃದ್ಧಿ, ಏರಿ ದುರಸ್ತಿಗೆ ಕ್ರಮ: ಸಚಿವ ಸಿ.ಪಿ.ಯೋಗೇಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ‘ನಮ್ಮ ಪೂರ್ವಿಕರು ಅಂದಿನ ಕಾಲದ ಗಾಡಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮಣ್ಣಿನಲ್ಲಿ ಕೆರೆ ಏರಿ ನಿರ್ಮಾಣ ಮಾಡಿರುತ್ತಾರೆ. ಹೀಗಾಗಿ ಈಗ ಭಾರಿ ವಾಹನ ಸಂಚಾರದಿಂದ ಏರಿಗಳು ಜಖಂ ಆಗುವುದು ಸಹಜ. ದ್ವಾರಸಮುದ್ರ ಕೆರೆ ಏರಿಯನ್ನು ಬಂದೋಬಸ್ತ್ ಆಗಿ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ದ್ವಾರಸಮುದ್ರ ಕೆರೆ ಏರಿ ಜಖಂಗೊಂಡು 6 ತಿಂಗಳು ಕಳೆದರೂ ಎಂಜಿನಿಯರ್‌ಗಳು ಏರಿ ದುರಸ್ತಿ ಕೆಲಸ ಕೈಗೊಂಡಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಸಚಿವರಾದ ಗೋಪಾಲಸ್ವಾಮಿ ಹಾಗೂ ಮಾಧುಸ್ವಾಮಿ ಇಬ್ಬರು ಈಗಾಗಲೇ ಏರಿ ವೀಕ್ಷಿಸಿ ಸರ್ಕಾರಕ್ಕೆ ಸ್ಥಿತಿಗತಿ ತಿಳಿಸಿದ್ದಾರೆ. ದ್ವಾರಸಮುದ್ರ ಕೆರೆ ಏರಿ ಬಂದೋಬಸ್ತ್ ಮಾಡಲು ನಾವು ಸಹ ಗಮನಹರಿಸಿದ್ದೇವೆ. ತಾಂತ್ರಿಕ ಸಮಿತಿಯ ಸಲಹೆ ಪಡೆದು ಅಗತ್ಯವಿರುವ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುತ್ತೇವೆ. ಕೆರೆಗಳಲ್ಲಿ ನೀರು ನಿಲ್ಲಿಸಿ ಅಂತರ್ಜಲ ವೃದ್ದಿಸುವುದರೊಂದಿಗೆ ಸುರಕ್ಷತೆಗೂ ಗಮನ ಹರಿಸುತ್ತಿದ್ದೇವೆ’ ಎಂದರು.

ಶಾಸಕ ಕೆ.ಎಸ್.ಲಿಂಗೇಶ್ ಅವರು, ’ದ್ವಾರಸಮುದ್ರ ಕೆರೆ ರಣಘಟ್ಟ ಯೋಜನೆಗೆ ಒಳಪಟ್ಟಿದೆ. ರಣಘಟ್ಟ ಯೋಜನೆಯಿಂದ ಹೊಯ್ಸಳರ ಕಾಲದ ನಾಲೆ ಮುಖಾಂತರ ದ್ವಾರಸಮುದ್ರ ಕೆರೆಗೆ ನೀರು ಬರಲಿದೆ. ಪ್ರವಾಸಿಗರು ಸಹ ಏರಿಯಲ್ಲಿ ಪ್ರಯಾಣಿಸಬೇಕಾಗಿದೆ. ಹೀಗಾಗಿ ಏರಿ ಬೇಗ ದುರಸ್ತಿ ಕೆಲಸ ಆಗಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಬಿಜೆಪಿ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಳ್ಳಿ ಸುರೇಶ್, ತಾ.ಪಂ. ಅಧ್ಯಕ್ಷೆ ಸುಮಾ ಪರಮೇಶ್, ಸದಸ್ಯ ಗಂಗೂರು ರಂಗೇಗೌಡ, ಮುಖಂಡರಾದ ಜಿ.ಎಸ್.ಪ್ರಸನ್ನ, ಕರಿಕಟ್ಟೆಹಳ್ಳಿ ಶಶಿಧರ ಮತ್ತಿತರರು ಇದ್ದರು.

ಎಂಜಿನಿಯರ್‌ ವಿರುದ್ಧ ರೈತರ ಆಕ್ರೋಶ
ಎಂಜಿನಿಯರ್‌ಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದ್ದರಿಂದ ಏರಿ ಅಪಾಯದ ಸ್ಥಿತಿಗೆ ತಲುಪಿತು ಎಂದು ರೈತ ಸಂಘದ ಮುಖಂಡ ಕೆ.ಪಿ.ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಆಗ ಸ್ಥಳದಲ್ಲಿದ್ದ ಹಲವು ರೈತರು ದನಿಗೂಡಿಸಿದರು.

ಏರಿ ದುರಸ್ತಿ ನೆಪದಲ್ಲಿ ಅಪರೂಪಕ್ಕೆ ತುಂಬಿದ ಕೆರೆ ನೀರನ್ನು ಖಾಲಿ ಮಾಡಲಾಗುತ್ತಿದೆ. ಏರಿಕೆ ಕಂಡಿದ್ದ ಅಂತರ್ಜಲ ಕುಸಿಯುತ್ತಿದೆ.
ಕಳೆದ ವರ್ಷ ಕೆರೆ ಏರಿಯ ಹಳೆಯ ಕಟ್ಟಡ ತೆಗೆದು ಹೊಸ ಕಟ್ಟಡ ನಿರ್ಮಾಣ ಮಾಡಿದ್ದರಿಂದ ಏರಿ ಸಡಿಲಗೊಂಡಿತು. ಏರಿ ಸಮಸ್ಯೆಯಿಂದ ಹಾಸನಕ್ಕೆ ದೂರದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಬದಲಿ ರಸ್ತೆಯಲ್ಲಿ ಮಲ್ಲಾಪುರ ಬಳಿ ಸೇತುವೆ ಕುಸಿಯುವ ಸ್ಥಿತಿಯಲ್ಲಿದೆ ಎಂದು ರೈತರು ದೂರಿದರು. ಸಚಿವರು ರೈತರನ್ನು ಸಮಾಧಾನ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು